
ಸಿಂಧನೂರು,ಏ.೧೪- ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಚುನಾವಣೆಯಲ್ಲಿ ರೈತ ಸಂಘ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣಪ್ಪ ಮರಳಿ ಹೇಳಿದರು.
ನಗರದ ಸಂಘದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ಬೆಳೆದ ಬೆಳೆಗೆ ಬೆಂಬಲ ನೀಡಬೇಕು ಸಮರ್ಪಕವಾಗಿ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಬೇಕು ಪಂಪ ಸೆಟ್‌ಗಳಿಗೆ ೧೨ ಗಂಟೆ ವಿದ್ಯುತ್ ಕೊಡಬೇಕು. ಇವುಗಳಿಗೆ ಸ್ಪಂದಿಸುವ ಕೆಲಸ ಮಾಡುವ ಅಭ್ಯರ್ಥಿಯನ್ನು ಬೆಂಬಲ ನೀಡುವುದಾಗಿ ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಖಾಸಗಿ ಔಷಧಿ ಅಂಗಡಿಗೆ ಚೀಟಿ ಬರೆದು ಕಳಿಸುತ್ತಾರೆ. ಅಲ್ಲದೆ ಸರ್ಕಾರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರದೆ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೂಲಕ ಬಡ ರೋಗಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಇವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸರಿಯಾಗಿ ಲಸಿಕೆ ಔಷಧಿಗಳು ಸಿಗುವುದಿಲ್ಲ. ಅಲ್ಲದೆ, ಕೃತಕ ಗರ್ಭಧಾರಣೆ ವ್ಯವಸ್ಥೆ ಇಲ್ಲ ಇದರಿಂದ ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದ್ದು ಇದರಿಂದ ಜಾನುವಾರಗಳನ್ನ ಸಾಕಿದ ಸಾರ್ವಜನಿಕರು ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಹಾಗೂ ಪಶು ಆಸ್ಪತ್ರೆಯಲ್ಲಿ ನಿತ್ಯ ಶೋಷಣೆಯಾಗುತ್ತಿದೆ ಎಂದರು.
ತಹಶೀಲ್ದಾರ ಕಛೇರಿಯಲ್ಲಿ ರೈತರ ಪಹಣಿ ಸೇರಿದಂತೆ ಇತರ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡಬೇಕು ಲಂಚ ಕೊಡದಿದ್ದರೆ ಕೆಲಸ ವಿಳಂಬ ಮಾಡುತ್ತಾರೆ. ಒಂದೊಂದು ಕೆಲಸಕ್ಕೆ ಇಂತಿಷ್ಟು ಎಂದು ಅಧಿಕಾರಿಗಳು ದರ ನಿಗದಿ ಮಾಡಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ರೈತರು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಕುಡಿಯುವ ನೀರು, ಶಾಲೆ, ಆಸ್ಪತ್ರೆ, ರಸ್ತೆ, ರೈತರ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಿ ಜನಪರ ಕೆಲಸ ಮಾಡುವ ಸೂಕ್ತ ಅಭ್ಯರ್ಥಿಗೆ ಬೆಂಬಲ ನೀಡಲು ರೈತ ಸಂಘ ತೀರ್ಮಾನ ತೆಗೆದು ಕೊಂಡಿದೆ ಎಂದು ಶರಣಪ್ಪ ಮರಳಿ ತಿಳಿಸಿದರು.
ಸಂಘದ ಮುಖಂಡರಾದ ರಾಮಯ್ಯ ಜವಳಗೇರಾ, ರಮೇಶ ಮುಕುಂದ, ನಾಗಪ್ಪ ಬೂದಿವಾಳ, ಮಹಾಂತೇಶ ಬೂದಿವಾಳ, ಕೊಠಾರಿ ಜಯಾ ಗಾಂಧಿನಗರ ಸೇರಿದಂತೆ ಇತರರು ಇದ್ದರು.