ರೈತರಿಗೆ ಸಲಹೆ ಮಾರ್ಗದರ್ಶನ ನೀಡಿ: ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.27: ಕೃಷಿ ಇಲಾಖೆ ಕೇವಲ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಮಧ್ಯವರ್ತಿ ಕೆಲಸಕ್ಕೆ ಸೀಮಿತವಾಗದೆ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ಮಾಡಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಮಾದರಿ ಪ್ರಗತಿಪರ ರೈತ ಸಮೂಹವನ್ನು ನಿರ್ಮಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಫಲಾನುಭವಿ ರೈತರಿಗೆ ಲಘು ನೀರಾವರಿ ಯೋಜನೆಯಡಿ ಮಂಜೂರಾಗಿರುವ ಪೈಪುಗಳು ಮತ್ತು ಸ್ಪಿಂಕ್ಲರ್ ಸಲಕರಣೆಗಳ ವಿತರಣೆ ಮತ್ತು ತಾಲೂಕು ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ದಿಯ ವಿಚಾರದಲ್ಲಿ ನಾನು ಎಂದಿಗೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಕೃಷಿ ಇಲಾಖೆ ಸರಕಾರದ ಸವಲತ್ತುಗಳ ವಿತರಣೆಯ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ, ಅರಣ್ಯ ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು, ಕುರಿ ಮತ್ತು ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಅಣಬೆ ಬೇಸಾಯ ಮತ್ತಿತರ ಕೃಷಿ ಚಟುವಟಿಕೆಗಳ ಬಗ್ಗೆಯೂ ರೈತ ಸಮೂಹಕ್ಕೆ ಅರಿವು ಮೂಡಿಸಿ ಜಾಗೃತಿಗೊಳಿಸುವ ಮತ್ತು ರೈತರನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಕೃಷಿಕ ಸಮಾಜದ ಸದಸ್ಯರೂ ಇದಕ್ಕೆ ಕೈಜೋಡಿಸಬೇಕು.
ಕೃಷಿಕ ಸಮಾಜದ ರೈತ ಪರವಾದ ಎಲ್ಲಾ ಕಾರ್ಯಯೋಜನೆಗಳಿಗೂ ನನ್ನ ಸಹಕಾರ ಇರುತ್ತದೆ ಎಂದ ಶಾಸಕರು ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣವನ್ನು ಕೈಬಿಟ್ಟಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಯೋಜನೆಗಳು ಜಾರಿಗೊಂಡರೂ ಅದರಲ್ಲಿ ಒಂದಷ್ಟು ಲೋಪಗಳು ಇದ್ದೇ ಇರುತ್ತವೆ. ಅಧಿಕಾರಿಗಳು ಯೋಜನೆಗಳ ಅನುಷ್ಟಾನದ ವೇಳೆ ಕಂಡು ಬರುವ ಲೋಪಗಳನ್ನು ಸರಿಪಡಿಸಬೇಕು. ಅದನ್ನು ಬಿಟ್ಟು ಯೋಜನೆಯನ್ನೆ ಸ್ಥಗಿತಗೊಳಿಸುವುದು ಸರಿಯಲ್ಲ. ಕೃಷಿ ಇಲಾಖೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ, ಬದುಗಳ ನಿರ್ಮಾಣ ಮತ್ತಿತರ ಕಾರ್ಯಯೋಜನೆಗಳನ್ನು ರೂಪಿಸಿದ್ದು ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆಂದರು.
ಮಂಡ್ಯ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಅಡಿಕೆ ಬೆಳೆಗೆ ಮಂಡ್ಯ ಜಿಲ್ಲೆಯ ವಾಯುಗುಣವೂ ಸಹಕಾರಿಯಾಗಿದೆ. ಆದರೆ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯನ್ನು ಅಡಿಕೆ ಬೆಳೆ ಪ್ರದೇಶ ಎಂದು ಪರಿಗಣಿಸದಿರುವುದರಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಈ ಬಗ್ಗೆ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಪ್ರಸ್ತಾಪಿಸಿ ಮಂಡ್ಯ ಜಿಲ್ಲೆಯನ್ನು ಅಡಿಕೆ ಕೃಷಿ ಕ್ಷೇತ್ರದ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತೇನೆಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎನ್.ಜಾನಕೀರಾಂ, ಉಪಾಧ್ಯಕ್ಷ ವಿ.ಎಸ್.ಸುಬ್ಬೇಗೌಡ, ರೈತ ಮುಖಂಡ ಎಲ್.ಬಿ.ಜಗದೀಶ್ ಮತ್ತಿತರರು ಮಾತನಾಡಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸಲಕರಣೆಗಳನ್ನು ಪಡೆದ ರೈತರಿಗೆ ರಾಜ್ಯ ಸರ್ಕಾರ ಹನಿ ನೀರಾವರಿಯ ಯೋಜನೆಯ ಲಾಭ ನೀಡುತ್ತಿಲ್ಲ. ಇದನ್ನು ಸರಿಪಡಿಸಬೇಕು, ತಾಲೂಕು ಕೃಷಿಕ ಸಮಾಜಕ್ಕೆ ಎ.ಪಿ.ಎಂ.ಸಿ ಆವರಣದಲ್ಲಿ ಅಥವಾ ಪಟ್ಟಣ ವ್ಯಾಪ್ತಿಯಲ್ಲಿ ಕೃಷಿಕ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಿಕೊಡಬೇಕು. ತಾಲೂಕಿನ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಹೇಮಾವತಿ ನದಿ ನೀರಿನಿಂದ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಮಂದಗೆರೆ ಮತ್ತು ಹೇಮಗಿರಿ ನಾಲಾ ಬಯಲಿನಲ್ಲಿ ಅಪಾರ ಪ್ರಮಾಣದ ತೆಂಗು, ಅಡಿಕೆ, ಕಬ್ಬು ಮತ್ತಿತರ ವಾಣಿಜ್ಯ ಬೆಳೆಗಳಿದ್ದು ಇವುಗಳ ಸಂರಕ್ಷಣೆಗೆ ಕಟ್ಟು ನೀರು ಪದ್ದತಿಯಡಿ ನಾಲೆಗಳಲ್ಲಿ ನೀರು ಹರಿಸಬೇಕು. ರೈತರು ಕಳೆದ ಸಾಲಿನಲ್ಲಿ 2070 ರೂಗಳಿಗೆ ಸ್ಪಿಂಕ್ಲರ್ ಸಲಕರಣೆಗಳನ್ನು ಪಡೆಯುತ್ತಿದ್ದರು. ರಾಜ್ಯ ಸರ್ಕಾರ ಇದೀಗ ಸ್ಪಿಂಕ್ಲರ್ ಸಲಕರಣೆಗಳ ತೆರಿಗೆ ಹೊರೆಯನ್ನು ರೈತರ ಮೇಲಿಯೇ ಹಾಕಿದ್ದು ಇದರಿಂದಾಗಿ ರೈತರು 4670 ಕೊಟ್ಟು ಸಲಕರಣೆಗಳನ್ನು ಪಡೆಯಬೇಕಾಗಿದೆ. ಹಿಂದಿನಂತೆ ಸಲಕರಣೆಗಳ ತೆರಿಗೆಯನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿದರು.
ಕೃಷಿಕ ಸಮಾಜದ ವತಿಯಿಂದ ನನ್ನ ಗಮನಕ್ಕೆ ತಂದಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಪ್ರಸ್ತಾಪಿಸಿ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಸಹಾಯಕ ಕೃಷಿ ಅಧಿಕಾರಿ ಶ್ರೀಧರ್, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್ ಸೇರಿದಂತೆ ಹಲವರಿದ್ದರು.