ರೈತರಿಗೆ ಸಮರ್ಪಕ ರಸಗೊಬ್ಬರ, ಬಿತ್ತನೆ ಬೀಜ ಪೂರೈಸಲು ಆಗ್ರಹ

ಕಲಬುರಗಿ,ಜೂ.23- ಮುಂಗಾರು ಹಂಗಾಮಿನ ಬಿತ್ತನೆ ಶುರುವಾಗಿದ್ದು, ರೈತರು ಬೀಜ, ಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಮುಂಗಾರು ಆರಂಭವಾಗುವ ಹಿನ್ನೆಲೆಯಲ್ಲಿ ‘ಜಿಲ್ಲೆಯಲ್ಲಿ ಬಿತ್ತನೆಗೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗದಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳ ಮುಖಾಂತರ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅಖಿಲ ಭಾರತ ರೈತ ಕೃಷಿಕಾರ್ಮಿಕರ (ಎಐಕೆಕೆಎಮ್‍ಎಸ್) ಸಂಘಟನೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ರೈತರು ಆತಂಕ ಪಡಬೇಕಾಗಿಲ್ಲ, ಸಾಕಾಗುವಷ್ಟು ಬೀಜ ಮತ್ತು ರಸಗೊಬ್ಬರ ಲಭ್ಯವಿದೆ’ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆಯನ್ನು ನೀಡುತ್ತಾ ಎಲ್ಲಾ ಮಾಧ್ಯಮಗಳಲ್ಲೂ ಪ್ರಕಟಣೆಗಳನ್ನು ಹೊರಡಿಸಿದ್ದಾರೆ. ಆದರೆ ಈ ಕುರಿತು ಜಿಲ್ಲೆಯ ನಾನಾ ಕಡೆಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿನ ಅಸಮರ್ಪಕ ಪೂರೈಕೆಯ ವಿರುದ್ಧ ರೈತರ ಆಕ್ರೋಷ ವ್ಯಕ್ತವಾಗುತ್ತಿದೆ. ಇಲ್ಲಿ ಅರ್ಹ ರೈತರಿಗೂ ಸಬ್ಸಿಡಿ ಆಧಾರದಲ್ಲಿ ಬೀಜ ಮತ್ತು ರಸಗೊಬ್ಬರ ಸಿಗದೇ ಇರುವುದು ದುರಂತವಾಗಿದೆ.
ಒಂದೆಡೆ ಸರ್ಕಾರ ಭರವಸೆ ನೀಡುತ್ತಿದೆ! ಇನ್ನೊಂದೆಡೆ ಸ್ಥಳಗಳಲ್ಲಿ ರಸಗೊಬ್ಬರ ಮತ್ತು ಬೀಜ ಸಿಗದೆ ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದು ವಿಚಿತ್ರ ವಿಪರ್ಯಾಸವೇ ಆಗಿದೆ.
ಕಲಬುರಗಿ ಜಿಲ್ಲೆಯಲ್ಲಿ 7.84 ಲಕ್ಷ ಹೆಕ್ಟರ್ ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಿರುವ ಸರ್ಕಾರವು ರೈತರಿಗೆ ಈ ಸಂದರ್ಭದಲ್ಲಿ ಅವಶ್ಯವಾದಷ್ಟು ರಸಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಸಂಘಟನೆ ಆರೋಪಿದೆ.
ಜಿಲ್ಲೆಗೆ 50 ಸಾವಿರ ಟನ್ ಗೊಬ್ಬರದ ಅಗತ್ಯವಿದೆ ಎಂದು ಒಂದು ಅಂದಾಜಿನ ಮಏರೆಗೆ ಹೇಳಲಾಗುತ್ತದೆ. ಆದರೆ ಕೃಷಿ ಇಲಾಖೆಯ ಬಳಿ ಕೇವಲ 6500 ಮೆಟ್ರಿಕ್ ಟನ್ ಮಾತ್ರ ಇರುವುದು ತಿಳಿದುಬಂದಿದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಸಾಕಷ್ಟು ವ್ಯಾತ್ಯಾಸವಿದೆ. ಅಲ್ಲದೆ ಡಿಎಪಿಯೊಂದಿಗೆ ಕಾಂಪ್ಲೆಕ್ಸ್ ಗೊಬ್ಬರ ಖರೀಸಿದರೆ ಮಾತ್ರ ಡಿಎಪಿ ಕೊಡುವುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಆದರೆ ಬಿತ್ತನೆಗೆ ಕಾಂಪ್ಲೆಕ್ಸ್‍ನ ಅಗತ್ಯವಿಲ್ಲ. ಅಲ್ಲದೇ ಡಿಎಪಿಯ ನಿಗಗದಿತ ಬೆಲೆ 1350 ರೂ. ಇದೆ. ಆದರೆ, ವ್ಯಾಪಾರಿಗಳು 100 ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಾ ರೈತರನ್ನು ಲೂಟಿಹೊಡೆಯುವುದನ್ನು ತಡೆಗಟ್ಟಲು ಬೇಕಾದ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
ಕರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಜಿಲ್ಲೆಯ ರೈತರು ಸಂಪೂರ್ಣವಾಗಿ ಕಂಗಾಲಾಗಿರುವುದು ತಮಗೂ ತಿಳಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳೂ ನಾಶವಾಗಿವೆ. ಅಲ್ಲಲ್ಲಿ ಅಲ್ಪಸ್ವಲ್ಪ ಕೃಷಿ ಕೆಲಸಗಳು ನಡೆದರೂ ಸರಿಯಾದ ಬೆಲೆ ಸಿಗದೆ ಜೀವನ ನಡೆಸುವುದೇ ಕಷ್ಟವಾಗಿತ್ತು. ನಂತರ ಕಳೆದ ವರ್ಷದವರೆಗೂ ಎಡೆಬಿಡದ ಭಾರಿ ಮಳೆಯಿಂದಾಗಿ ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆಗಳೂ ಭಾರಿ ನಷ್ಟವನ್ನು ನಮ್ಮ ತಾಲೂಕಿನ ರೈತರು ಕಂಡಿದ್ದಾರೆ. ಆದ್ದರಿಂದ ಈ ರೈತರಿಗೆ ಅವಶ್ಯಕವಾದಷ್ಟು ರಸಗೊಬ್ಬರ ಮತ್ತು ಬೀಜವನ್ನು ಪೂರೈಸಬೇಕೆಂದು ವಿಶ್ವನಾಥ್ ಸಿಂಗೆ, ಮಹೇಶ್ ಎಸ್. ಬಿ. ಅವರು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.