ರೈತರಿಗೆ ಸಮರ್ಪಕ ಬೀಜ, ಗೊಬ್ಬರ ವಿತರಿಸಿ: ರೂಪಾ

ದೇವದುರ್ಗ.ಜೂ.೧೧-ಮುಂಗಾರು ಆರಂಭವಾಗಿದ್ದು, ಕರೊನಾ ಲಾಕ್‌ಡೌನ್ ನೆಪದಲ್ಲಿ ತಾಲೂಕಿನ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ, ಬಿತ್ತನೆ ಬೀಜ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರ ಹಾಗೂ ಕೃಷಿ ಇಲಾಖೆ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ್ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ತಾಲೂಕಿನಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಹಾಗೂ ಉಪನಿರ್ದೇಶಕರಿಗೆ ಹಲವು ಸಲ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ.
ಬಿತ್ತನೆ ಬೀಜ ಹಾಗೂ ಗೊಬ್ಬರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಡಿಎಪಿ, ಯೂರಿಯಾ ಗೊಬ್ಬರ ತೀವ್ರವಾಗಿ ಕಾಡುತ್ತಿದೆ. ಅಧಿಕಾರಿಗಳ ಬಳಿ ಸಮಸ್ಯೆ ಹೇಳಿದರೆ, ಲಾಕ್‌ಡೌನ್ ನೆಪ ಹೇಳುತ್ತಿದ್ದಾರೆ. ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕ ಅವರಿಗೆ ಈ ಬಗ್ಗೆ ದೂರು ನೀಡಿದರೂ, ರೈತರ ಸಂಘದ ಮನವಿ ಸ್ಪಂದಿಸುತ್ತಿಲ್ಲ. ಹಲವು ಸಲ ಕಚೇರಿಗೆ ತೆರಳಿ ಸಮಸ್ಯೆ ಹೇಳಿದರೂ ಅಲ್ಲಿದ್ದೇನೆ, ಇಲ್ಲಿದ್ದೇನೆ ಎನ್ನುವ ಸಬೂಬು ಹೇಳುತ್ತಿದ್ದಾರೆ.
ರೈತರ ನಡುವೆ ಇದ್ದು, ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ರೈತ ಸಂಘ ತಾಲೂಕಿನ ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡಲು ಶ್ರಮಿಸುತ್ತಿದೆ. ಗೊಬ್ಬರದಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆಯುತ್ತಿದ್ದು, ವಿಷಕಾರಿ ಗೊಬ್ಬರ ಪೂರೈಕೆಯಾದ ಮಾಹಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಳಿ ನಡೆಸಿ, ಅಕ್ರಮ ಗೊಬ್ಬರ, ಬೀಜ ವಶಕ್ಕೆ ಪಡೆಯಬೇಕು.
ಪ್ರತಿಯೊಂದು ಗೊಬ್ಬರ ಹಾಗೂ ಬೀಜ ಮಾರಾಟ ಅಂಗಡಿಗಳ ಮುಂದೆ ದರಪಟ್ಟಿ ಸೇರಿ ಲಭ್ಯವಿರುವ ವಸ್ತುಗಳ ಬಗ್ಗೆ ಮಾಹಿತಿ ಒಳಗೊಂಡ ನಾಮಫಲಕ ಹಾಕಬೇಕು. ಖರೀದಿ ಮಾಡಿದ ರೈತರಿಗೆ ತಪ್ಪದೆ ಸೀಲ್ ಒಳಗೊಂಡ ಬಿಲ್ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಂಗಪ್ಪ ನಾಯಕ, ನಾಗರಾಜ ಸಿರವಾರ, ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ನಾಯಕ, ನಿಂಗಪ್ಪ, ಮರಿಲಿಂಗ ಪಾಟೀಲ್ ಗೌರಂಪೇಟೆ, ಶೇಖರಯ್ಯಸ್ವಾಮಿ ಇತರರಿದ್ದರು.