ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ತಲುಪಿಸುವಂತೆ ಸೂಚನೆ

ಚಾಮರಾಜನಗರ, ಸೆ.16- ಜಿಲ್ಲೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ರಸಗೊಬ್ಬರ ಸಿಗುವಂತಾಗಬೇಕು. ಹೂ, ಹಣ್ಣು, ತರಕಾರಿ ಬೆಳೆದ ಫಲಾನುಭವಿಗಳಿಗೆ ಪರಿಹಾರಧನ ಶೀಘ್ರವಾಗಿ ತಲುಪಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಅಶ್ವಿನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯ ಪ್ರಮಾಣ ಉತ್ತಮ ರೀತಿಯಲ್ಲಿ ಆಗಿದ್ದು, ರೈತರಿಗೆ ರಸಗೊಬ್ಬರವನ್ನು ತಲುಪಿಸಬೇಕು. ಹನೂರು ತಾಲೂಕಿನಲ್ಲಿ ಯೂರಿಯಾ ಕೊರತೆ ಕಂಡು ಬಂದಿದ್ದು, ಆ ಸಮಸ್ಯೆಯನ್ನು ಬೇಗ ನಿವಾರಿಸಬೇಕು. ಹಲವು ರೈತರಿಗೆ ಕೃಷಿ ಹೊಂಡದ ಸಹಾಯ ಧನವು ಬಿಡುಗಡೆಯಾಗಿಲ್ಲ. ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ತಲುಪಿಸುವಂತೆ ಮಾಡಬೇಕು ಎಂದು ತಿಳಿದರು.
ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜು, ಚೆನ್ನಪ್ಪ, ಕೆ.ಎಸ್.ಮಹೇಶ್, ಸಿ.ಎನ್. ಬಾಲರಾಜ್, ಮರಗದ ಮಣಿ ಸೇರಿದಂತೆ ಹಲವು ಸದಸ್ಯರು ರಸಗೊಬ್ಬರ ಅಗತ್ಯಕ್ಕೆ ತಕ್ಕಂತೆ ರೈತರಿಗೆ ದೊರೆಯಲು ಏರ್ಪಾಡು ಮಾಡಬೇಕು. ರಸಗೊಬ್ಬರ ದಾಸ್ತಾನು ಕುರಿತು ತಾಲ್ಲೂಕುವಾರು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಾಣ್ ರಾವ್ ಅವರು ತಾಲ್ಲೂಕು ವಾರು ಮಾಹಿತಿ ಪ್ರತಿಯನ್ನು ಒದಗಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ವಿಷಯ ಕುರಿತ ಚರ್ಚೆ ವೇಳೆ ಎಂ. ಅಶ್ವಿನಿ ಅವರು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಕಾಡದಂತೆ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಟ್ಟಡ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ರಕ್ಷಾ ಸೇವಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆ ವಿಷಯ ಪ್ರಸ್ತಾಪ ವೇಳೆ ಮಾತನಾಡಿದ ಸದಸ್ಯ ಸಿ.ಎನ್. ಬಾಲರಾಜ್, ಕೋವಿಡ್-19 ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಇದರ ಬಗ್ಗೆ ಅಂಕಿ ಅಂಶಗಳೊಡನೆ ಸಭೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಾಗೂ ಕೂಡಲೇ ಇದರ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ನಿಯಂತ್ರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಮರ್ಪಕ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಸ್ಯಾನಿಟೇಜೇಷನ್, ಸೂಕ್ತ ಸ್ಪಂದನೆಯಂತಹ ಕ್ರಮಗಳಿಗೆ ಮುಂದಾಗಬೇಕು, ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸುವವರಿಗೆ ಸಹಾಯ ಧನವನ್ನು ಹೆಚ್ಚಿಸಬೇಕು ಎಂದು ಸದಸ್ಯರುಗಳು ಒತ್ತಾಯಿಸಿದರು.
ಸದಸ್ಯರಾದ ಸಿ.ಎನ್. ಬಾಲರಾಜ್, ಕೆ.ಎಸ್. ಮಹೇಶ್, ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷÀ ಜಿ.ಮಧುಶಂಕರ್ ಸೇರಿದಂತೆ ಹಲವು ಸದಸ್ಯರು ವೈದ್ಯಕೀಯ ಸೇವೆ ರಾತ್ರಿ ವೇಳೆಯು ಜನರಿಗೆ ಸಿಗಬೇಕಿದೆ ಎಂದರು. ಸದಸ್ಯ ಕಮಲ್ ನಾಗರಾಜ್ ಅವರು ಮಾತನಾಡಿ, ಮುಳ್ಳೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರವನ್ನು ಶೀಘ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾನಿಗಳು ಸ್ಥಳÀ ನೀಡಲು ಮುಂದೆ ಬಂದಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಸಭೆಯಲ್ಲಿ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು.