ರೈತರಿಗೆ ಸನ್ಮಾನಿಸುವ ಬ್ರಿಗೇಡ್‍ನ ಕಾರ್ಯ ಮಾದರಿ: ರವೀಂದ್ರ ಸ್ವಾಮಿ

ಔರಾದ್: ರೈತರಿಗೆ ಸನ್ಮಾನಿಸಿ ಈ ದೇಶದ ಬೆನ್ನೆಲುಬು ಅನ್ನದಾತನ ಗೌರವ ಹೆಚ್ಚಿಸಿದ ಸಂಬಾಜಿ ಬ್ರಿಗೇಡ್‍ನ ಕಾರ್ಯ ಶ್ಲಾಘನಿಯವಾಗಿದ್ದು, ಇದು ಎಲ್ಲ ಸ್ತರಗಳಿಗೆ ಮಾದರಿಯಾಗಿದೆ ಎಂದು ಏಕತಾ ಫೌಂಡೇಶನ್ ಅಧ್ಯಕ್ಷರೂ ಹಾಗೂ ಔರಾದ್ ಯುವ ಮುಖಂಡ ರವಿಂದ್ರ ಸ್ವಾಮಿ ಅಭಿಪ್ರಾಯ ಪಟ್ಟರು.

ತಾಲೂಕಿನ ಎಕಂಬಾ ಗ್ರಾಮದಲ್ಲಿ ಸಾಂಬಾಜಿ ಬ್ರಿಗೇಡ್ ಯುವ ಸಂಘಟನೆ ಹಾಗೂ ಏಕತಾ ಫೌಂಡೇಶನ್‍ಗಳ ಸಹಯೋಗದಲ್ಲಿ ಜರುಗಿದ ಮಹಾಸಮ್ರಾಟ ಬಳಿರಾಜಾ ಮಹೋತ್ಸವ ಹಾಗೂ ತಾಲೂಕಿನ ರೈತರಿಗಾಗಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

12 ವರ್ಷಗಳ ಹಿಂದೆ ಏಕತಾ ಫೌಂಡೇಶನ್ ಸ್ಥಾಪಿಸಿ ತನ್ಮೂಲಕ ರೈತರ, ಯುವಕರ ಹಾಗೂ ದೀನ ದಲಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಏಕತಾ ಫೌಂಡೇಶನ್ ಇದು ಒಂದು ಪಕ್ಷವಲ್ಲ. ಇದು ಜನಸೇವೆಗಾಗಿ ಉದಯಿಸಿದ ಸಂಘಟನೆಯಾಗಿದೆ. ಸಂಭಾಜಿ ಬ್ರಿಗೇಡ್ ಮತ್ತು ಏಕತಾ ಫೌಂಡೇಶನ್ ನಡುವೆ ಹೊಂದಾಣಿಕೆ ಇದೆ. ಎರಡೂ ಸಂಘಟನೆಗಳ ವತಿಯಿಂದ ಬಡವರಿಗೆ ಸಹಾಯ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.

ಏಕತಾ ಫೌಂಡೇಶನ್ ವತಿಯಿಂದ ತಿಂಗಳಿಗೆ ಒಂದು ಬಾರಿ ಸಂಘಟನೆ ಕಾರ್ಯಕರ್ತರ ಸಭೆ ನಡೆಸಿ ನಗರದ ಸ್ವಚ್ಛತಾ ಕಾರ್ಯ, ಯುವಕರಿಗೆ ಪ್ರೇರಣೆ ನೀಡುವ ಕಾರ್ಯ, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಕಾರ್ಯ, ಹಳ್ಳಿಯಲ್ಲಿರುವ ಬಡವರಿಗೆ ವಿವಿಧ ಕಾರ್ಯಗಳಲ್ಲಿ ಸಹಾಯಹಸ್ತ ಚಾಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮ ಫೌಂಡೇಶನ್ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ನಮಗೆ ಯಾರೇ ಕಷ್ಟ ಎಂದು ಬಂದರೂ ಸಹಾಯ ಮಾಡುವ ಸಂಘಟನೆಯೇ ಏಕತಾ ಫೌಂಡೇಶನ್ ಆಗಿದೆ. ನಾನು ಕೂಡಾ ರೈತರ ಕುಟುಂಬದಿಂದ ಬಂದ ಕಾರಣ ರೈತರ ಸಮಸ್ಯೆ ಏನೆಂಬುದು ನನಗೂ ಅರ್ಥವಾಗುತ್ತದೆ. ನಮ್ಮ ಮನೆಯಲ್ಲಿ ಯಾರೂ ಕೂಡಾ ಎಂ.ಎಲ್.ಎ. ಎಂ.ಪಿಗಳಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ನನಗೆ ಬಡ ಸ್ನೇಹಿತರ ಸಂಪರ್ಕವಿದೆ. ಆತ್ಮವಿಶ್ವಾಸದಿಂದ ನಿರಂತರ ಸಂಘರ್ಷ ಮಾಡುತ್ತಿದ್ದೇನೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳಿಯ ಮುಖಂಡ ಅರುಣದಾದಾ ಪಾಟೀಲ ಮಾತನಾಡಿ, ಇಂದು ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಭಾರತ ಕೃಷಿ ಪ್ರಧಾನವಾದ ದೇಶವಾದ್ದರಿಂದ ಇಲ್ಲಿ ರೈತರಿಗೆ ಮಾತ್ರ ಪ್ರಾಧಾನ್ಯತೆ ಸಿಗಬೇಕು. ರೈತರೇ ಸುಖಿ ಇಲ್ಲದಿದ್ದ ಮೇಲೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಇಂದು ರವಿ ಸ್ವಾಮಿಯವರು ಗಲ್ವಾನ್ ವ್ಯಾಲಿಯಲ್ಲಿ ಪ್ರಾಣಾರ್ಪಣೆ ಮಾಡಿದ ವೀರ ಸೈನಿಕರ ಕುಟುಂದವರಿಗೆ ಕರೆಸಿ ಸನ್ಮಾನ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ. ಅಲ್ಲದೆ ಯುವಕರಿಗಾಗಿ ಕ್ರಿಕೇಟ್ ಟೂರ್ನಾಮೆಂಟ್ ಆಯೋಜನೆ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದರು.

ಕೃಷಿಯಲ್ಲಿ ಸೇವೆ ಸಲ್ಲಿಸಿದ ಸುಮಾರು 50ಕ್ಕೂ ಹೆಚ್ಚು ಆದರ್ಶ ರೈತರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಜೀಜಾವು ಬ್ರಿಗೇಡ್‍ನ ಪ್ರಮುಖ ವಕ್ತಾರೆ ರಂಜನಾತಾಯಿ ಹಾಸುರೆ ಹಾಗೂ ಜಾಲನಾದ ಕೃಷಿ ಪಂಡಿತರಾದ ಪಂಡಿತ್ ವಾಸರೆ ಮಾತನಾಡಿದರು.

ವೇದಿಕೆ ಮೇಲೆ ಯುವ ಮುಖಂಡ ದೀಪಕ್ ಪಾಟೀಲ ಚಾಂದೋರಿ, ಭೀಮರಾವ ಶಿಂಧೆ, ಕೃಷಿ ಪಂಡಿತರಾದ ರಾಜೇಂದ್ರ ಕದಮ್, ಪತ್ರಕರ್ತರಾದ ಗುರುನಾಥ ವಡ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.