ರೈತರಿಗೆ ವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡಿ

ದೇವದುರ್ಗ.ನ.೮- ರಾಜ್ಯದಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ರೈತರು ವಿವಿಧ ಬೆಳೆಗಳು ಹಾಳಾಗಿದ್ದು, ಸಮರ್ಪಕವಾಗಿ ಸರ್ವೇ ನಡೆಸಿ ಎಲ್ಲ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮುಖಂಡರು ಸೋಮವಾರ ಧರಣಿ ನಡೆಸಿದರು.
ಅತಿವೃಷ್ಟಿಯಿಂದ ತಾಲೂಕಿನಲ್ಲಿ ಅಪಾರ ಬೆಳೆಹಾನಿಯಾಗಿದ್ದು ತೊಗರಿ, ಹತ್ತಿ, ಮೆಣಸಿನಕಾಯಿ, ಸಜ್ಜೆ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿ ರೈತರಿಗೆ ಭಾರಿ ನಷ್ಟವಾಗುತ್ತಿದೆ. ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕಾದ ಅಧಿಕಾರಿಗಳು ಕೃಷಿಕರ ಕೈಗೆ ಸಿಗುತ್ತಿಲ್ಲ. ಬೆಳೆಗಳು ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿದ್ದು, ಅನ್ನದಾತರನ್ನು ಸಂಕಷ್ಟ ದೂಡಿದಂತಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸದೆ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಬೆಳೆನಷ್ಟ ಪರಿಹಾರ ತಕ್ಷಣವೇ ನೀಡಬೇಕು. ರೈತರ ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಯೊಂದಿಗೆ ವರ್ಷವಿಡಿ ಖರೀದಿ ಮಾಡಬೇಕು. ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಬೆಂಬಲಬೆಲೆ ಘೋಷಣೆ ಮಾಡಬೇಕು. ಕೆಬಿಜೆಎನ್‌ಎಲ್ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಮಾಡಿ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಯರಗುಡ್ಡದಲ್ಲಿ ಮಳೆಗೆ ಮನೆಕಳೆದುಕೊಂಡ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತ ಜಮೀನುಗಳಲ್ಲಿ ಅಪೂರ್ಣಗೊಂಡ ಕಾಲುವೆ ಪೂರ್ಣಗೊಳಿಸಬೇಕು. ವಂದಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಜನಸೇವೆ ನೀಡಬೇಕು. ವಂದಲಿ ಸೀಮಾಂತರದ ಸರ್ವೇ ನಂ.೧೪೩ಬಿ/ಪಿ-೧ರಲ್ಲಿ ಕೈಬಿಟ್ಟ ೪.೩೫ಎಕರೆ ಜಾಗ ಪಹಣಿಯಲ್ಲಿ ಸೇರಿಸಬೇಕು. ಇದೇ ಗ್ರಾಮದ ಸರ್ವೇ ನಂ.೧೩೪ರಲ್ಲಿ ೪.೩೪ಎಕರೆ ಜಾಗದ ನಕ್ಷೆ ನೀಡಬೇಕು ಸೇರಿ ಇನ್ನಿತರ ಬೇಡಿಕೆಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಶಿವಾನಂದಗೌಡ, ಗೌರವಾಧ್ಯಕ್ಷ ನಿಂಗಪ್ಪ ನಾಯಕ, ಹನುಮಂತ ವಂದಲಿ, ಬುಡ್ಡನಗೌಡ ಯರಗುಡ್ಡ, ಎಚ್.ಬಾಬು ವಂದಲಿ, ಬಸಪ್ಪಗೌಡ, ಸಂಜೀವಮೂರ್ತಿ, ಜಯಗೌಡ, ಸಿದ್ದಣ್ಣ ದೇವರಮನಿ, ಲಕ್ಷ್ಮಿಕಾಂತ ಪಾಟೀಲ್, ಮಹಾವೀರ ಲಿಂಗೇರಿ ಇತರರಿದ್ದರು.