ರೈತರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ತರಬೇತಿ

ದಾವಣಗೆರೆ. ಜೂ.೮; ಆನಗೋಡು ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ರೈತರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ತರಬೇತಿ ಮತ್ತು ಕಿರುಚೀಲ ವಿತರಣೆ ಕಾರ್ಯಕ್ರಮದಲ್ಲಿ  ಸಂಸದ ಜಿ.ಎಂ. ಸಿದ್ಧೇಶ್ವರಭಾಗವಹಿಸಿದ್ದರು ಈ ವೇಳೆ ಮಾತನಾಡಿದ ಅವರು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯು ಕೇಂದ್ರ ಪುರಷ್ಕೃತ ಯೋಜನೆಯಾಗಿದ್ದು, ನಮ್ಮ ಸರ್ಕಾರ ರೈತರಿಗಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಲು ಮತ್ತು ಗುಣಮಟ್ಟದ ಆಹಾರ ಧಾನ್ಯವನ್ನು ಹೆಚ್ಚು ಉತ್ಪಾದನೆ ಮಾಡುವ ಉದ್ಧೇಶದಿಂದ ನಮ್ಮ ಜಿಲ್ಲೆಗೆ ಸುಮಾರು ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು ತೊಗರಿ ಕಿರು ಚೀಲ ವಿತರಿಸಲು ತಿಳಿಸಿದನ್ವಯ  ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ರೈತರು ಸಹ ಈ ಯೋಜನೆಯ ಸದುಪಯೋಗ ಮಾಡಿಕೊಂಡು ಮೆಕ್ಕೇಜೋಳ ಬೆಳೆಯೊಂದಿಗೆ ಅಕ್ಕಡಿ ಬೆಳೆಗಳನ್ನು ಬೆಳೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು.  ಜಿಲ್ಲೆಯಲ್ಲಿ ಇಲ್ಲಿಯವರೆಗೂ ಬೀಜ ಮತ್ತು ರಸಗೊಬ್ಬರ ಸಮಪರ್ಕವಾಗಿ ವಿತರಣೆಯಾಗುತ್ತಿದೆ. ಉತ್ತಮ ಮಳೆಯಾಗಿ ರೈತರಿಗೂ ಉತ್ತಮ ಫಸಲು ನೀಡಲೆಂದು ಬೇಡಿಕೊಂಡು ಕಿರು ಚೀಲಗಳನ್ನು ರೈತರುಗಳಿಗೆ ವಿತರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ  ಶ್ರೀನಿವಾಸ್ ಚಿಂತಾಲ್ ರವರು ದಾವಣಗೆರೆ ಜಿಲ್ಲೆಯು ಕರ್ನಾಟಕದ ಮೆಕ್ಕೇಜೋಳ ಕಣಜವಾಗಿದೆ ಹಿಂದಿನ ದಿನಗಳಲ್ಲಿ ಮೆಕ್ಕೇಜೋಳ, ಜೋಳದ ಬೆಳೆಗಳೊಂದಿಗೆ ಅಕ್ಕಡಿ ಬೆಳೆಯಾಗಿ ತೊಗರಿ, ಅಲಸಂದಿ, ಹೆಸರು ಮತ್ತು ಉದ್ದು ಬೆಳೆಗಳನ್ನು ಬೆಳೆಯುವ ಪದ್ಧತಿ ಇತ್ತು. ಕಾಲ ಕ್ರಮೇಣ ರೈತರು ಏಕ ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರಿಗೆ ಏನಾದರೊಂದು ವಿಶೇಷ ಯೋಜನೆಯನ್ನು ಇಲಾಖೆಯಿಂದ ಹಮ್ಮಿಕೊಳ್ಳಬೇಕು ಎಂದು ಯೋಚಿಸಿ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ನಮ್ಮ ಜಿಲ್ಲೆಗೆ ಸುಮಾರು ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಂದು ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಿ ಅನುಷ್ಟಾನ ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಬಯಲು ಸೀಮೆಯ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಹೆಚ್.ಕೆ. . ಕೃಷಿ ಅಧಿಕಾರಿಗಳಾದ  ರವಿಕುಮಾರ್,  ಚಂದ್ರಪ್ಪ,  ಸುರೇಶ್ ಹಾಗೂ ಕು.ರೇಷ್ಮಾ ಹಾಜರಿದ್ದರು.