ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್

ಬೀದರ್,ಜೂ.14-ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಜಿಲ್ಲೆಯ ರೈತರಿಗೆ ರಸಗೊಬ್ಬರದ ಕೊರತೆ ಆಗದಂತೆ ರಾಜ್ಯದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ತನ್ನೊಟ್ಟಿಗೆ ಅಧ್ಯರ್ಪಿತಗೊಂಡ ಜಿಲ್ಲೆಯ 188 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಕಳೆದ 1972 ರಿಂದ ಸುಧೀರ್ಘ 51 ವರ್ಷಗಳಿಂದ ನಿರಂತರವಾಗಿ ರೈತರ ಮನೆ ಬಾಗಿಲಲ್ಲೆ ರಸಗೊಬ್ಬರ ದೊರಕುವಂತೆ ಮಾಡುತ್ತಿದೆ. ರಸಗೊಬ್ಬರ ಬೇಡಿಕೆಯನ್ನು ಖರೀಫ ಮತ್ತು ರಬ್ಬಿ ಋತು ಆರಂಭದ ಒಂದು ತಿಂಗಳ ಮುಂಚಿತವಾಗಿಯೇ ಪ್ಯಾಕ್ಸಗಳಿಂದ ಬೇಡಿಕೆ ಪಡೆದು ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಹಾಗೂ ಬೀದರ ಶಾಖೆಗೆ ರಸಗೊಬ್ಬರದ ಬೇಡಿಕೆಯ ವರದಿ ಸಲ್ಲಿಸಿ ಬೇಡಿಕೆಗೆ ಅನುಗುಣವಾಗಿ ಮೇ ತಿಂಗಳಲ್ಲೇ ರಸಗೊಬ್ಬರವನ್ನು ಸ್ವಂತ ಗೋಡಾನಲ್ಲಿ ದಾಸ್ತಾನು ಮಾಡಿಡುವಂತೆ ವ್ಯವಸ್ಥೆ ಕಲ್ಪಿಸಿ ರಸಗೊಬ್ಬರಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖೇನ ರೈತರಿಗೆ ದೊರಕುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪ್ಯಾಕ್ಸಗಳಲ್ಲಿ ದಾಸ್ತಾನು ಮಾಡಿದ ರಸಗೊಬ್ಬರದ ಮೊತ್ತದಷ್ಟು ಹಣಕ್ಕೆ ಭದ್ರತೆ ಮುಂಚಿತವಾಗಿ ನೀಡುತ್ತದೆ. ಖರೀಫ ಬಿತ್ತನೆ ಆರಂಭವಾದ ನಂತರ ಪ್ಯಾಕ್ಸಗಳಿಗೆ ಸರಬರಾಜಾದ ರಸಗೊಬ್ಬರದ ಮೊತ್ತವನ್ನು ಪ್ರತ್ಯೇಕ ಪ್ಯಾಕ್ಸವಾರು ಬ್ಯಾಂಕಿನಲ್ಲಿರುವ ರಸಗೊಬ್ಬರ ಖಾತೆಗೆ ಜಮಾ ಮಾಡುತ್ತಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಬ್ಯಾಂಕು ಭದ್ರತೆಯನ್ನು ನೀಡಿ ರೈತರಿಗೆ ಪ್ಯಾಕ್ಸಗಳ ಮುಖಾಂತರ ಸ್ಥಳೀಯವಾಗಿ ರಸಗೊಬ್ಬರ ಅವರ ಗ್ರಾಮದಲ್ಲೆ ದೊರಕುವಂತೆ ಮಾಡುತ್ತಿರುವುದು ಇಡೀ ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಬೀದರ ಡಿಸಿಸಿ ಬ್ಯಾಂಕ್ ಮಾದರಿಯಾಗಿ ಕೆಲಸ ಮಾಡುತ್ತಿದೆ. ದಿವಂಗತ ಡಾ:ಗುರುಪಾದಪ್ಪ ನಾಗಮಾರಪಳ್ಳಿ ರವರು ಹಾಕಿಕೊಟ್ಟ ದಾರಿಯಲ್ಲೇ ಮುನ್ನಡೆಯುತ್ತಾ, ಜಿಲ್ಲೆಯ ಎಲ್ಲಾ ಕುಟುಂಬಗಳಿಗೆ ಬ್ಯಾಂಕಿನ ಸೇವೆ ನೀಡುತ್ತಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ಬೀದರ ಡಿಸಿಸಿ ಬ್ಯಾಂಕಿನ ಸಾಧನೆಯ ಕುರಿತು ಚರ್ಚಿಸಿ “ಬೀದರ ಡಿಸಿಸಿ ಬ್ಯಾಂಕಿನ ರಸಗೊಬ್ಬರದ ಸರಬರಾಜಿನ ಮಾದರಿ” ಎಂದು ಘೋಷಣೆ ಮಾಡಿ ಬೀದರ ಮಾದರಿಯನ್ನು ಉಳಿದ 20 ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕುಗಳು ಅಳವಡಿಸಿಕೊಳ್ಳಲು ನಿರ್ಧಸಿರಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ರಸಗೊಬ್ಬರದ ತೊಂದರೆ ಆಗಿ ರೈತರು ಪ್ರತಿಭಟನೆ ಮತ್ತು ಹೋರಾಟ ಮಾಡುವುದು ಹಾಗೂ ಹಲವು ಬಾರಿ ಲಾಠಿಚಾರ್ಜ ಸಹ ಆಗಿರುವುದು ನಾವು ಕಾಣುತ್ತೇವೆ. ಆದರೆ ಇಲ್ಲಿಯವರೆಗೆ ಬೀದರ ಜಿಲ್ಲೆಯಲ್ಲಿ ಯಾವತ್ತು ಸಹ ರಸಗೊಬ್ಬರದ ತೊಂದರೆ ಆಗಿರುವುದು ಕಂಡುಬಂದಿರುವುದಿಲ್ಲ. ಈ ಯಶಸ್ಸಿಗೆ ಬೀದರ ಜಿಲ್ಲೆಯಲ್ಲಿರುವ ಸಹಕಾರ ತತ್ವ ನಂಬಿದ ಸಹಕಾರಿಗಳು ಮತ್ತು ಉತ್ತಮ ಸಹಕಾರ ಚಳುವಳಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರ ಮತ್ತು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತ, ಕೃಷಿ ಇಲಾಖೆ, ಜಿಲ್ಲಾ ಬೀಜ ನಿಗಮ, ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ. ಔರಾದ, ಮತ್ತು ಸಹಕಾರ ಇಲಾಖೆಗಳೊಟ್ಟಿಗಿನ ವಿಶ್ವಾಸವೆ ಈ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಸಹ (2023 ರ ಮುಂಗಾರು ಹಂಗಾಮು ಪ್ರಾರಂಭಕ್ಕಿಂತ ಮುಂಚಿತವಾಗಿ) ಪ್ಯಾಕ್ಸ್‍ಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.