ರೈತರಿಗೆ ಮಾರಕ ಕೃಷಿಕಾಯ್ದೆ ವಾಪಸ್ಸಾತಿಗೆ ರೈತರ ಪ್ರತಿಭಟನೆ

ಬೆಂಗಳೂರು, ಸೆ. ೧೨- ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳ ವಾಪಸ್ ಹಾಗೂ ವಿದ್ಯುತ್ ಖಾಸಗಿ ಬಿಲ್ ಜಾರಿ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ರೈತರು ರೈಲ್ವೆ ನಿಲ್ದಾಣದ ಮುಂಭಾಗ ಸಮಾವೇಶಗೊಂಡು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಅಧಿವೇಶನದಲ್ಲಿಯೇ ರೈತರಿಗೆ ಮಾರಕವಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.
ಗೋಹತ್ಯೆ ಕಾಯ್ದೆ ನಿಷೇಧದ ಹೆಸರಲ್ಲಿ ನಾವು ದೇಶಭಕ್ತರು, ನಾವು ಗೋ ರಕ್ಷಣೆ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಾ ಗೋಶಾಲೆಗಳನ್ನು ಉತ್ತೇಜಿಸಿ ಹಣವಂತರು ಮತ್ತು ಕಂಪೆನಿಗಳ ಪರವಾದಂತಹ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇದನ್ನು ಕೈ ಬಿಟ್ಟು ನಮಗೆ ಗೋಶಾಲೆಗಳ ಬದಲಾಗಿ ಗೋಮಾಳಗಳನ್ನು ನೀಡಬೇಕು. ಕೃಷಿ ಕಾಯ್ದೆ ಸೇರಿದಂತೆ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವುದರ ಜತೆಗೆ ಹಾಲಿನ ದರವನ್ನು ೫ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಾಕೃತಿಕ ವಿಕೋಪದಿಂದ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ, ಬೆಳೆ ಹಾನಿ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ರೈತರು ಲಕ್ಷಾಂತರ ಕೋಟಿ ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಾರು ಮಾಡಲು ರಾಷ್ಟ್ರೀಯ ವಿಪತ್ತಿನ ಕಾರ್ಯಕ್ರಮವನ್ನು ಹೆಚ್ಚು ಮಾಡಿ ರೈತರಿಗೆ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣವನ್ನು ಕಾಲಮಿತಿಯೊಳಗೆ ವಾಪಸ್ ಕೊಡಿಸಬೇಕು. ಪ್ರತಿ ಜಿಲ್ಲೆ ಮತ್ತು ಪ್ರತಿ ಕಾರ್ಖಾನೆಗಳಲ್ಲಿ ಎಫ್‌ಆರ್‌ಪಿ ಮತ್ತು ಎಸ್‌ಎಪಿ ಸೇರಿದ ದರವನ್ನು ಪ್ರಕಟಿಸಬೇಕು. ತೂಕ ಮತ್ತು ಅಳತೆಯನ್ನು ಗೌರವವೂರ್ವಕವಾಗಿ ಸ್ವೀಕರಿಸಬೇಕು ಎಂದರು.
ರೈತರ ಸಾಲಕ್ಕೆ ಸಂಬಂದಿಸಿದಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ ಸಾಲ ಮನ್ನಾ ಕಾರ್ಯಕ್ರಮ ಇದುವರೆಗೂ ಜಾರಿಯಾಗಿಲ್ಲ. ಕೂಡಲೇ ರೈತರ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಡ್ಡಿ ರಹಿತ ಸಾಲವನ್ನು ರೈತರಿಗೆ ವಿತರಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ತೆರಳಿದ ರೈತರನ್ನು ಫ್ರೀಡಂಪಾರ್ಕ್‌ನಲ್ಲಿ ಪೊಲೀಸರು ತಡೆದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ರೈತರು ಪಾಲ್ಗೊಂಡಿದ್ದರು.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಮುಖಂಡ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಮತ್ತು ಕಾರ್ಯಕರ್ತರು ಇಂದು ನಗರದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು.