ರೈತರಿಗೆ ಮಾರಕವಾದ ಕೃಷಿ ಕಾಯ್ದೆ ಹಿಂಪಡೆಯಲು ಕೋಡಿಹಳ್ಳಿ ಆಗ್ರಹ

ಲಿಂಗಸುಗೂರು,ಜೂ.೧೪-
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ಅವಧಿಯಲ್ಲಿ ಜಾರಿಗೊಳಿಸಿದ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಈಗಿರುವ ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಇವರು ಇಂದು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸರ್ಕಾರಕ್ಕೆ ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ರೈತರಿಗೆ ಭರವಸೆ ನೀಡಿದ ಪ್ರಕಾರ ಹಾಗೂ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಭರವಸೆಗಳ ಪೈಕಿ ಕೃಷಿ ಕಾಯ್ದೆಗಳನ್ನು ಶಾಸನಬದ್ಧವಾಗಿ ಕೂಡಲೇ ವಾಪಸ್ ಪಡೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.
ರೈತರ ಪ್ರಮುಖ ಬೇಡಿಕೆಗಳು ಭೂ ಸುಧಾರಣೆ ಕಾಯ್ದೆ ಎಂಪಿಎಂಸಿ ಕಾಯ್ದೆ ಹಾಗೂ ರೈತರ ಬೆಳೆದ ಬೆಳೆಗಳಿಗೆ (ಎಂಎಸ್‌ಬಿ) ಬೆಂಬಲ ಬೆಲೆ ಕಾಯ್ದೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ರೈತರ ಸಂಕಷ್ಟ ನಿವಾರಿಸಲು ಹಿಂದೇಟು ಹಾಕಿದ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಾರದಂತೆ ಆಗಿದೆ ಎಂದು ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿದರು .
ಈಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ಕಾಯ್ದೆ ಗಳನ್ನು ವಾಪಸ್ ಪಡೆಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಹೇಳಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಬಗ್ಗೆ ಪರಿಶೀಲನೆ ಮಾಡುತ್ತದೆ ಎಂದು ಅವರ ಹೇಳಿಕೆಯಿಂದ ರೈತರು ಆತಂಕಪಡುವ ಸ್ಥಿತಿಯಲ್ಲಿ ಇದ್ದಾರೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪರಿಶೀಲನೆ ಮಾಡುವ ಅಗತ್ಯವೇನಿಲ್ಲ ಎಂದರು.
ರೈತ ಈ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ಕೇವಲ ಭಾಷಣದ ಮೂಲಕ ಬೊಬ್ಬೆ ಹೊಡೆಯುವ ಮುಖಾಂತರ ರೈತರಿಗೆ ಕೃಷಿ ಕೂಲಿಕಾರರಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವಪುತ್ರಗೌಡ ಜಾಗೀರನಂದಿಹಾಳ ಇವರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಬಸನಗೌಡ, ಪ್ರಸಾದ್ ರೆಡ್ಡಿ ಪತ್ರಹಳ್ಳಿ, ಬೈರೇಗೌಡ ಬೆಂಗಳೂರು, ನಗರ ರಮೇಶ್, ಬೆಂಗಳೂರು ಗ್ರಾಮಾಂತರ ಹುಲುಗಪ್ಪ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.