ರೈತರಿಗೆ ಭೂಮಿ ವಾಪಸ್ಸಿಗೆ ಸುಪ್ರೀಂಗೆ ಅರ್ಜಿ

ಬೆಂಗಳೂರು, ಮಾ. ೨೭- ಬೆಂಗಳೂರು-ಮೈಸೂರು ನಡುವಿನ ರಸ್ತೆಗೆ ನೈಸ್ ಸಂಸ್ಥೆ ಟೌನ್‌ಶಿಫ್‌ಗಾಗಿ ವಶಪಡಿಸಿಕೊಂಡಿರುವ ಜಮೀನಿಗೆ ೨೦೧೩ ರಲ್ಲಿ ಕೆಐಎಡಿಬಿ ನಿಗದಿಪಡಿಸಿರುವ ಬೆಲೆಯನ್ನು ನೀಡದಿದ್ದರೆ ಆ ಜಮೀನಿನನ್ನೆಲ್ಲಾ ಮತ್ತೆ ರೈತರಿಗೆ ವಾಪಸ್ ಕೊಡಿಸಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನೈಸ್ ಕಂಪನಿ ಭೂ ಪರಿಹಾರ ಸಂಬಂಧ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಯ ಸಭೆ ಇಂದು ವಿಧಾನಸೌಧದಲ್ಲಿ ನಡೆದಿದ್ದು, ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ನೈಸ್ ಸಂಸ್ಥೆ ಟೌನ್‌ಶಿಪ್‌ಗಾಗಿ ೧೯೦೬ ಎಕರೆ ಜಮೀನನ್ನು ಭೂಸ್ವಾದೀನಪಡಿಸಿಕೊಂಡಿದ್ದು, ಈ ಜಮೀನಿಗೆ ೪೧ ಲಕ್ಷ ರೂ. ಪ್ರತಿ ಎಕರೆಗೆ ನೀಡುವುದಾಗಿ ಹೇಳಿತ್ತು ಆದರೆ ಇದನ್ನು ಒಪ್ಪದೆ ೨೦೧೩ ರಲ್ಲಿ ಕೆಐಎಡಿಬಿ ಪ್ರತಿ ಎಕರೆಗೆ ಪರಿಹಾರ ಹಣವನ್ನು ಏರಿಕೆ ಮಾಡಿತ್ತು. ಆದರೂ ನೈಸ್ ಸಂಸ್ಥೆ ಪರಿಹಾರ ನೀಡಿರಲಿಲ್ಲ. ಈಗ ಲೆಕ್ಕ ಹಾಕಿದರೆ ನೈಸ್ ಸಂಸ್ಥೆ ಪ್ರತಿ ಎಕರೆಗೆ ೩ ಕೋಟಿ ರೂ.ಗಳಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಹಾಗಾಗಿ ಈ ಹಣ ನೀಡುವಂತೆ ನೈಸ್ ಸಂಸ್ಥೆಗೆ ಸೂಚನೆ ನೀಡಲಾಗುವುದು ಎಂದರು.
ಕೆಐಎಡಿಬಿ ನಿಗದಿಪಡಿಸುವ ರೈತರ ಪರಿಹಾರ ಹಣವನ್ನು ನೈಸ್ ಸಂಸ್ಥೆ ನೀಡದಿದ್ದರೆ ಅವರು ವಶಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ವಾಪಸ್ ಕೊಡಿಸಲು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕುವ ತೀರ್ಮಾನವನ್ನು ಸಚಿವ ಸಂಪುಟದ ಉಪ ಸಮಿತಿಯಲ್ಲಿ ಮಾಡಿದ್ದೇವೆ. ಇದನ್ನು ಸಚಿವ ಸಂಪುಟದ ಸಭೆಯಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ನೈಸ್ ಸಂಸ್ಥೆ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಗಳಲ್ಲಿ ಕೆಲ ಮೊಕದ್ದಮೆಗಳು ವಜಾ ಆಗಿವೆ. ಹಾಗಾಗಿ ಈಗ ಆ ಸಂಸ್ಥೆ ರೈತರಿಗೆ ಪರಿಹಾರ ನೀಡಲೇಬೇಕು. ರೈತರಿಗೆ ಅನ್ಯಾಯವಾಗದಂತೆ ತೀರ್ಮಾನ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದರು ಎಂದು ಸಚಿವ ಸೋಮಶೇಖರ್ ಹೇಳಿದರು.
ನೈಸ್ ಸಂಸ್ಥೆ ಬೆಂಗಳೂರು-ಮೈಸೂರು ನಡುವಿನ ರಸ್ತೆ ಸಂಪೂರ್ಣ ಕಾಂಕ್ರೀಟ್ ಆದ ನಂತರ ಸುಂಕ ಸಂಗ್ರಹಿಸಬೇಕು ಎಂಬ ನಿಯಮವೂ ಇದೆ. ಆದರೆ, ಶೇ. ೫೦ ರಷ್ಟು ಮಾತ್ರ ಕಾಂಕ್ರಿಟ್ ರಸ್ತೆ ಆಗಿದೆ. ಆದರೂ ಸುಂಕ ಸಂದಾಯಿಸುತ್ತಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಸುಂಕ ಸಂಗ್ರಹಕ್ಕೆ ಕಡಿವಾಣ ಹಾಕಲೂ ಸಾಧ್ಯವಾಗಿಲ್ಲ. ಈ ತಡೆ ತೆರೆವಿಗೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಇದ್ದರು.