ರೈತರಿಗೆ ಬೆಳೆಹಾನಿ ಪರಿಹಾರ ನೀಡಿ ಕರ್ನಾಟಕ ರೈತ ಸಂಘ ಒತ್ತಾಯ

????????????????????????????????????????????????????????????????????????????????????????????????????????????????????????????????????????????????????????????????????????????????????????????

ದೇವದುರ್ಗ.ನ.೧೯-ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಕೂಡಲೇ ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಕರ್ನಾಟಕ ರೈತ ಸಂಘ ಶುಕ್ರವಾರ ಮನವಿ ಸಲ್ಲಿಸಿತು.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಇದರಿಂದ ನಾಟಿ ಮಾಡಿ ಭತ್ತ ಬೆಳೆ ನೆಲಕ್ಕುರುಳಿ ಭಾರಿ ನಷ್ಟವಾಗಿದೆ. ಇದರ ಜತೆ ತೊಗರಿ, ಮೆಣಸಿನಕಾಯಿ, ಹತ್ತಿ ಸೇರಿ ವಿವಿಧ ಬೆಳೆಗಳು ಮಳೆಗೆ ಹಾನಿಗೊಳಗಾಗಿವೆ. ಸಾಲಸೂಲ ಮಾಡಿ ರೈತರು ಬಿತ್ತನೆ ಮಾಡಿದ್ದು, ಅಕಾಲಿಕ ಮಳೆಯಿಂದ ಬೆಳೆ ಹಾಳಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ದೇವದುರ್ಗ, ಜಾಲಹಳ್ಳಿ ಹೋಬಳಿ, ಗಬ್ಬೂರು ಹೋಬಳಿ, ಅರಕೇರಾ ವ್ಯಾಪ್ತಿಯಲ್ಲಿ ಭತ್ತ ಅಕಾಲಿಕ ಮಳೆಗೆ ಸಂಪೂರ್ಣ ನೆಲಕ್ಕುರುಳಿದೆ. ಕೂಡಲೇ ಈ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಸಮಗ್ರ ಸಮೀಕ್ಷೆ ನಡೆಸಬೇಕು. ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಅಕಾಲಿಕ ಮಳೆ, ಮೋಡದ ಮುಸುಕಿನಿಂದ ಹತ್ತಿ, ಮೆಣಸಿನಕಾಯಿ, ತೊಗರಿ ಬೆಳೆದ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಮುಖಂಡರಾದ ಸಿದ್ದಲಿಂಗಪ್ಪ ಜೇರಬಂಡಿ, ದುರುಗಪ್ಪ ಇರಬಗೇರಾ, ಮಲ್ಲಯ್ಯ ಕಟ್ಟಿಮನಿ, ಬಾಬು ಮಲದಕಲ್, ಶಿವಪ್ಪ ಸಮುದ್ರ, ಶಿವರಾಮ, ರಮೇಶ ದೇವದುರ್ಗ, ಗಂಗಪ್ಪ, ಮಲ್ಲೇಶ, ಮಲ್ಲಪ್ಪ ಮುಂಡರಗಿ ಇತರರಿದ್ದರು.