ರೈತರಿಗೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡಲು ವಿವಿಧೆಡೆ ತಾತ್ಕಾಲಿಕ ಹೆಚ್ಚುವರಿ ವಿತರಣಾ ಕೇಂದ್ರಃ ಶಾಸಕ ಎಂ.ಬಿ.ಪಾಟೀಲ್

ವಿಜಯಪುರ, ಜೂ.5-ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ಧತೆಗಳನ್ನು ನಡೆಸಿದ್ದು, ಅವರಿಗೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡಲು ಬಬಲೇಶ್ವರ ವಿಧಾನ ಸಭಾಕ್ಷೇತ್ರದ ಟಕ್ಕಳಕಿ, ಹೊನವಾಡ, ಕಾಖಂಡಕಿ, ನಿಡೋಣಿ ಮತ್ತು ಕೃಷ್ಣಾ ನಗರಗಳಲ್ಲಿ ತಾತ್ಕಾಲಿಕ ಹೆಚ್ಚುವರಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಶನಿವಾರದಿಂದ ಈ ಸ್ಥಳಗಳಲ್ಲಿ ವಿತರಣೆ ಆರಂಭವಾಗಲಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕೊರೊನಾ ಕಾಯಿಲೆಯ ಗಂಭೀರತೆ ಕಾರಣ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ಈ ಹಿಂದೆ ಬೀಜ, ಗೊಬ್ಬರ ಲಭ್ಯವಾಗುತ್ತಿದ್ದ ವಿಜಯಪುರ, ಬಬಲೇಶ್ವರ, ತಿಕೋಟಾ ಹಾಗೂ ಮಮದಾಪುರ ರೈತ ಸಂಪರ್ಕ ಕೇಂದ್ರಗಳಿಗೆ ಸಂಚರಿಸುವುದು ಯೋಗ್ಯವಲ್ಲ. ಮತ್ತು ಆ ಕೇಂದ್ರಗಳಲ್ಲಿ ಜನದಟ್ಟನೆ ಕಡಿಮೆ ಮಾಡುವ ಉದ್ದೇಶದಿಂದ, ಆಯಾ ಭಾಗಗಳಲ್ಲಿಯೇ ತಾತ್ಕಾಲಿಕ ಹೆಚ್ಚುವರಿ ಕೇಂದ್ರಗಳನ್ನು ಮಾಡಿ, ಬೀಜ, ಗೊಬ್ಬರ ವಿತರಿಸಿ, ಕೊರೊನಾ ಕಾಯಿಲೆ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರದ ಮೂಲಕ ಕೋರಲಾಗಿತ್ತು.
ಈ ಕೋರಿಕೆ ಅನ್ವಯ ನಾಳೆ ಶನಿವಾರದಿಂದಲೇ ತಾತ್ಕಾಲಿಕ ಹೆಚ್ಚುವರಿ ಕೇಂದ್ರಗಳಲ್ಲಿ ವಿತರಣೆ ಆರಂಭವಾಗಲಿದ್ದು, ರೈತರು ಸದುಪಯೋಗ ಪಡೆದುಕೊಳ್ಳಲು ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.