ಅಥಣಿ :ಮೇ.31: ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಹಾಗೂ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದು ತಾಲೂಕಾ ಕೃಷಿ ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಕಟ್ಟುನಿಟ್ಟಿನ ಸೂಚನೆ ನೀಡಿದರು,
ಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಗತ್ಯವಾದ ಬಿತ್ತನೆ ಬೀಜ, ಹಾಗೂ ರಸಗೊಬ್ಬರಗಳನ್ನ ದಾಸ್ತಾನು ಮಾಡಿಕೊಳ್ಳಬೇಕು, ರೈತರಿಗೆ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು. ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು. ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು ತಾಲೂಕಾ ಮಟ್ಟದ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಒಗಳು ಹಾಜರಿರಬೇಕು. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಬೇಡಿಕೆ ಹೆಚ್ಚಾದರೆ ತಕ್ಷಣ ನನ್ನ ಗಮನಕ್ಕೆ ತರಬೇಕು, ನಕಲಿ ಗೊಬ್ಬರ ತಯಾರಿಕಾ ಘಟಕಗಳ ಮೇಲೆ ನಿಗಾ ವಹಿಸಬೇಕು, ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದ ಕೃಷಿ ಇಲಾಖೆಯ ಅಧಿಕಾರಿ ನಿಂಗಣ್ಣ ಬಿರಾದಾರ ಇದಕ್ಕೆ ಉತ್ತರಿಸಿ ಸಧ್ಯಕ್ಕೆ ಬಿತ್ತನೆ ಬೀಜಗಳಿಗೆ ಹಾಗೂ ರಸಗೊಬ್ಬರಗಳು ಲಭ್ಯವಿದ್ದು. ಆದ್ಯತೆಯ ಮೇರೆಗೆ ಬಿತ್ತನೆ ಬೀಜದಲ್ಲಿ ಹಾಗೂ ರಸಗೊಬ್ಬರದಲ್ಲಿ ಯಾವುದೇ ರೀತಿಯ ಕೊರತೆ ಆದರೆ ತಕ್ಷಣ ತಮ್ಮ ಗಮನಕ್ಕೆ ತರುತ್ತೇನೆ, ಎಂದು ಶಾಸಕರಿಗೆ ಮಾಹಿತಿ ನೀಡಿದರು.