
(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ನ5: ಸರಕಾರ ರೈತರನ್ನು ಸಂಪೂರ್ಣವಾಗಿ ಮರೆತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದರೂ ಸಹಿತ ರೈತರನ್ನುಮರೆತಿರುವುದನ್ನು ನೋಡಿದರೆ ಅಧಿಕಾರದ ಮತ್ತಿನಲ್ಲಿತೇಲಾಡುತ್ತಿರುವುದು ಕಂಡು ಬರುತ್ತಿದೆ. ಈಗಲಾದರೂ ರೈತರ ಬರ ನಿರ್ವಹಣೆಗಾಗಿ ಭಾಗ್ಯ ಕರುಣಿಸಲು ಸರಕಾರ ಮುಂದಾಗಬೇಕೆಂದು ಮಾಜಿ ಸಚಿವರುಗಳಾದ ಸಿ.ಸಿ.ಪಾಟೀಲ್ ಮತ್ತು ಬಿ.ಶ್ರೀರಾಮುಲು ಒತ್ತಾಯಿಸಿದರು.
ಅವರು ಪಟ್ಟಣ ಹೊರವಲಯದಲ್ಲಿನ ಹೊಲಕ್ಕೆ ಬೇಟಿ ನೀಡಿ ಬಾಡಿರುವ ಬೆಳೆಯನ್ನು ನೋಡಿ ಮಾತನಾಡಿದರು.
ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಜೊತೆಗೆ ರೈತರಿಗೆ ಬದುಕಲು ಶಕ್ತಿ ತುಂಬುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಬೆಕು. ಈ ಬರ ಪರಿಸ್ಥಿತಿಯಿಂದಾಗಿ ರೈತರೆಲ್ಲ ಗುಳೆ ಹೊರಟಿರುವುದು ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಕೇವಲ 139 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಯಾವುದಕ್ಕು ಸಾಲುತ್ತಿಲ್ಲ. ಕನಿಷ್ಠ 3000 ಕೋಟಿ ಬರ ಪರಿಹಾರ ಘೋಷಿಸಬೇಕಿತ್ತು.
ಈಗಾಗಲೇ ಕೇಂದ್ರ ಸರಕಾರದಿಂದ ಬರ ಅಧ್ಯಯನ ತಂಡ ಬಂದು ರೈತರ ಜಮೀನುಗಳನ್ನು ಪರಿಶೀಲನೆ ಮಾಡಿದೆ. ರಾಜ್ಯ ಸರಕಾರ ಎಲ್ಲದಕ್ಕೂ ಕೇಂದ್ರ ಕಡೆ ಬೆರಳು ಮಾಡದೇ ತಮ್ಮ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸುವ ಗ್ಯಾರಂಟಿ ಒದಗಿಸಲಿ. ನಿಜವಾಗಿ ರೈತರ ಕಣ್ಣಿರು ಒರೆಸುವ ಕ್ರಮಕ್ಕೆ ಮುಂದಾಗಬೇಕು. ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ, ಎಸ್.ವಿ.ಸಂಕನೂರ, ಕಳಕಪ್ಪ ಬಂಡಿ, ಮುತ್ತಣ್ಣ ಲಿಂಗನಗೌಡ್ರ, ರವಿ ದಂಡಿನ,ಭೀಮಸಿಂಗ ರಾಠೋಡ, ಫಕ್ಕಿರೇಶ ರಟ್ಟಿಹಳ್ಳಿ, ದೀಪು ಕಪ್ಪತ್ತನವರ, ತಿಮ್ಮರೆಡ್ಡಿ ಮರಡ್ಡಿ, ನಾಗರಾಜ ಲಕ್ಕುಂಡಿ, ಗೂಳಪ್ಪ ಕರಿಗಾರ, ಜಾನು ಲಮಾಣಿ, ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ರಾಜೀವ ರೆಡ್ಡೇರ, ಮುಂತಾದವರು ಉಪಸ್ಥಿತರಿದ್ದರು.