ರೈತರಿಗೆ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ರೂಪಿಸಿ, ಯಶಸ್ವಿಗೊಳಿಸಿಃ ಜಿ.ಪಂ ಅಧ್ಯಕ್ಷೆ ಕಳ್ಳಿಮನಿ

ವಿಜಯಪುರ, ನ.12-ರೈತರಿಗೆ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ರೈತರ ತರಬೇತಿ ಕಾರ್ಯಕ್ರಮಗಳನ್ನೂ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಕಳ್ಳಿಮನಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
2020-21 ನೇ ಸಾಲಿನ ಅಕ್ಟೋಬರ್ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಪ್ರಾಣಿಗಳ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಅದರಂತೆ ನೆರೆ ಹಿನ್ನೆಲೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇದಕ್ಕಾಗಿ ಕೆರೆಗಳಿಂದ ನೀರು ಒದಗಿಸಿ ಶಾಶ್ವತ ಪರಿಹಾರ ಒದಗಿಸುವ ಹಾಗೂ ಜಲಧಾರೆ ಯೋಜನೆಯ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರಿಂದ, ಪಾಲಕರಿಂದ ಆಹಾರ ಸರಿಯಾಗಿ ಪೂರೈಕೆಯಾಗದಿರುವುದು ಸೇರಿದಂತೆ ಆಹಾರ ವಿತರಣೆಗೆ ಸಂಬಂಧಿಸಿದಂತೆ ದೂರುಗಳು ಬರುತ್ತಿದ್ದು, ಅವುಗಳನ್ನು ಕೂಡಲೇ ಪರಿಹರಿಸುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೆರೆಯಿಂದ ಗಂಗಾಕಲ್ಯಾಣ ಯೋಜನೆಯಲ್ಲಾದ ಹಾನಿಯನ್ನು ಕೂಡಲೇ ಸರಿಪಡಿಸಿ, ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಕಾರ್ಯಕೈಗೊಳ್ಳುವಂತೆ, ಗಂಗಾಕಲ್ಯಾಣ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ್, ಗುರುರಾಜ ಪಾಟೀಲ್, ಪ್ರತಿಭಾ ಪಾಟೀಲ್ ಸೇರಿದಂತೆ ಜಿಲ್ಲಾಮಟ್ಟದ, ನಿಗಮ ಮಂಡಳಿಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.