ರೈತರಿಗೆ ಪರಿಹಾರ ನೀಡಿ:ಗೋಪಾಲ ಮೌರ್ಯ ಒತ್ತಾಯ

ಸೇಡಂ,ಜ,21:ತಾಲೂಕಿನಲ್ಲಿ”ನೆಟೆ ರೋಗಕ್ಕೆ ತುತ್ತಾಗಿರುವ ತೊಗರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ತೊಗರಿ ಮಾತ್ರವಲ್ಲದೆ, ವಿವಿಧ ಬೆಳೆಗಳೂ ಅತೀವೃಷ್ಠಿಯಿಂದ ಹಾನಿಯಾಗಿವೆ. ಹಾನಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಅಂಬೇಡ್ಕರ್ ಯುವ ಸೇನೆಯ ತಾಲೂಕ ಘಟಕದ ಅಧ್ಯಕ್ಷ ಗೋಪಾಲ ಮೌರ್ಯ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ತಾಲೂಕಿನ ರೈತರು ವಾಣಿಜ್ಯ ಬೆಳೆಯಾದ ತೊಗರಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ನೆಟೆ ರೋಗದಿಂದ ತೊಗರಿ ಬೆಳೆ ನಷ್ಟವಾಗಿದ್ದು, ರೈತರ ಬದುಕು ಬೀದಿಗೆ ಬಂದಂತಾಗಿದೆ. ಮುಂಗಾರು ಬಿತ್ತನೆ ಮಾಡಿ ಮೊಳಕೆ ಒಡೆದ ನಂತರ ಬವನಹುಳ ಕಾಟದಿಂದ ಬೆಳೆ ಹಾಳಾಗಿದೆ. ಜೊತೆಗೆ, ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾ, ತೊಗರಿಯಂತಹ ವಾಣಿಜ್ಯ ಬೆಳೆಗಳು ಅಧಿಕ ಮಟ್ಟದಲ್ಲಿ ನಾಶವಾಗಿವೆ. ತಾಲೂಕಿನ ರೈತರು ಕಂಗಾಲಾಗಿದ್ದಾರೆ.
ಎಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ರೈತರಿಂದ ಹಣ ಕಟ್ಟಿಸಿಕೊಂಡ ವಿಮಾ ಕಂಪನಿಗಳು, ಈಗ ಬೆಳೆಹಾನಿಗೆ ವಿಮಾ ಪರಿಹಾರ ನೀಡದೇ ವಂಚಿಸುತ್ತಿವೆ. ರೈತರು ಕಟ್ಟಿದ ಹಣ ವಾಪಸು ಬರದಂತಾಗಿದೆ. ವಿಮೆ ನಿಯಮಗಳನ್ನು ವಿಮಾ ಕಂಪನಿಗಳು ಗಾಳಿಗೆ ತೂರಿ, ರೈತರ ಬೆನ್ನಿಗೆ ಚೂರಿ ಹಾಕಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.