ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ – ಜಿ.ವೆಂಕಟರೆಡ್ಡಿ

ರಾಯಚೂರು.ಜು.೨೧- ಕೃಷ್ಣಾ ಹಾಗೂ ತುಂಗಭದ್ರಾ ನದಿ ದಂಡೆಗಳ ರೈತರ ಹೋಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭೂಮಿ ನಾಶವಾಗಿದ್ದು, ತಕ್ಷಣವೇ ಸರ್ಕಾರ ಮತ್ತು ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕೆಂದು ಲೋಕ ಜನಶಕ್ತಿ ಕಿಶನ್ ಸೆಲ್ ರಾಜಾಧ್ಯಕ್ಷರು ಹಾಗೂ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾದ ಜಿ.ವೆಂಕಟರೆಡ್ಡಿ ಅವರು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗದಿದ್ದರೂ, ಎರಡು ನದಿಗಳು ತುಂಬಿ ಉಕ್ಕಿ ಹರಿಯುತ್ತಿವೆ. ಬ್ರಿಜ್ ಕಂ ಬ್ಯಾರೇಜ್ ಗೇಟುಗಳು ತೆರೆಯದೆ ಇಂಜಿನಿಯರ್ ಬೇಜವಾಬ್ದಾರಿ ತೋರಿದ್ದರಿಂದ ಹರಿಯುವ ನೀರು ಹಿಂದೆ ಸರಿದು ರೈತರ ಹೊಲಗಳಿಗೆ ನುಗ್ಗಿ ಅಪಾರ ಭೂಮಿ ಹಾಳಾಗಿದ್ದು, ರೈತರು ಕಂಗಾಲಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಕ್ಷಣ ಶಾಸಕರು ಜಿಲ್ಲಾಡಳಿತ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಆದ ನಷ್ಟ ಪರಿಹಾರ ಒದಗಿಸಬೇಕು. ಕೃಷ್ಣಾ ಮತ್ತು ತುಂಗಭದ್ರಾ ನದಿ ತೀರದ ಹಳ್ಳಿಗಳ ರೈತರ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ತಕ್ಷಣವೇ ಪರಿಹಾರ ವಿತರಿಸಬೇಕು, ವಿಳಂಬ ಧೋರಣೆ ತಾಳಿದರೆ ರೈತರನ್ನು ಒಳಗೊಂಡು ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದ್ದಾರೆ.