ರೈತರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರಗಳು ವಿಫಲ

ಕೋಲಾರ,ಸೆ,೭- ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತರಿಗೆ ನ್ಯಾಯ ಕೊಡುವಲ್ಲಿ ಸರಕಾರಗಳು ವಿಫಲವಾಗಿದ್ದು ರೈತರನ್ನು ಎಚ್ಚರಿಸಬೇಕಾಗಿದೆ ಎಂದು ಕೆ.ಪಿ.ಆರ್.ಎಸ್ ರಾಜ್ಯ ಅಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ೯ ನೆಯ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದ ನಂತರ ಜನರ ಸಾಧಕ ಭಾಧಕಗಳ ಬಗ್ಗೆ ವಿಮರ್ಶೆ ಮಾಡದೇ ಕೇವಲ ಭ್ರಮೆಗಳಲ್ಲಿ ಮನುಷ್ಯರ ಭಾವನಾತ್ಮಕ ವಿಷಯಗಳ ಬಗ್ಗೆ ಜನರನ್ನು ದಿಕ್ಕು ತಪ್ಪಿಸಿದ್ದೇ ಸರಕಾರಗಳ ದೊಡ್ಡ ಸಾಧನೆಯಾಗಿದೆ ಎಂದರು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ನಾಮಕಾವಸ್ಥೆಯಾಗಿದೆ ದೇಶದ ಶೇ ೫೩ ರಷ್ಟು ರೈತರ ಬೆವರ ಹನಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ರೈತರು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳತ್ತಾ ಇದ್ದು ಕಾರ್ಪೊರೇಟ್ ಸಂಸ್ಥೆಗಳ ಹಿಡಿತದಲ್ಲಿ ಕೃಷಿ ಭೂಮಿಯನ್ನು ನೀಡುವ ಮೂಲಕ ದೇಶದ ಶೇ ೫೨ರಷ್ಟು ಜನರನ್ನು ಕೃಷಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಸರ್ಕಾರಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್ ನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ದೇಶದಲ್ಲಿ ಶೇ ೮೫ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಕೃಷಿ ನೀತಿ ಸಿದ್ಧಪಡಿಸಬೇಕು. ಹಾಗಾದಾಗ ಅವರ ಬದುಕು ಹಸನಾಗಬಹುದು ಕೃಷಿ ವಲಯವನ್ನು ಕಾರ್ಪೊರೇಟ್‌ಗಳ ಕೈವಶ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅದರಿಂದ ತನಗೆ ಹಿನ್ನಡೆಯುಂಟಾಗುತ್ತಿದೆ ಎಂಬುದರ ಅರಿವಿದ್ದರೂ ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಈಗ ಎಲ್ಲರಲ್ಲೂ ರೈತ ಪ್ರಜ್ಞೆ ಮೂಡಿಸಬೇಕು ಕೊರೊನಾ ಎರಡನೇ ಅಲೆ ರೈತರನ್ನು ಗಾಢವಾಗಿ ಬಾಧಿಸಿದೆ. ಮೂರನೇ ಅಲೆ ಬಂದರೆ ಶೇ ೨೫ರಷ್ಟು ಗ್ರಾಮೀಣ ಭಾಗದ ರೈತರು ನಾಶವಾಗುತ್ತಾರೆ ರೈತ ವಿರೋಧಿ ಕಾಯ್ದೆಗಳು ಅಧಿಕಾರದಲ್ಲಿರುವವರಿಗೆ ಲಾಭ ತಂದುಕೊಡಬಹುದಷ್ಟೆ. ರೈತ ಚಳವಳಿ ರೈತರಲ್ಲಿ ಸ್ವಾಭಿಮಾನ ಬೆಳೆಸಲಿದೆ ಎಂದರು
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಒಂದೇ ಒಂದು ಗುರುತರವಾದ ಯೋಜನೆಯನ್ನು ರೂಪಿಸಿಲ್ಲ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಹಾವಳಿಯಿಂದ ಬೆಳೆಗಳು ನಷ್ಟ ಆಗಿದ್ದರೂ ಪರಿಹಾರ ನೀಡಿಲ್ಲ ರೈತರ ಜಂಟಿ ಸಮೀಕ್ಷೆ ಮಾಡಿಲ್ಲ ಆದರೂ ಸರಕಾರದ ದೊಡ್ಡ ಸಾಧನೆಯ ರೀತಿಯಲ್ಲಿ ಸಾಧನಾ ಜನೋತ್ಸವ ಮಾಡಲು ಹೊರಟಿದ್ದು ಯಾವ ಪುರುಷಾರ್ಥಕ್ಕೆ ಎಂದರು
ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಎನ್.ಎನ್ ಶ್ರೀರಾಮ್, ಕಾರ್ಯದರ್ಶಿ ವಿ.ನಾರಾಯಣರಡ್ಡಿ, ಗೌರವ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷರಾದ ಆಲಹಳ್ಳಿ ವೆಂಕಟೇಶ್, ಕೃಷ್ಣೇಗೌಡ, ಹೊಲ್ಲಂಬಳ್ಳಿ ವೆಂಕಟೇಶ್ ಸಹ ಕಾರ್ಯದರ್ಶಿ ಗಂಗಮ್ಮ, ಎನ್ ಯಲ್ಲಪ್ಪ, ರಾಮರೆಡ್ಡಿ ಮುಂತಾದವರು ಇದ್ದರು
ಸಮ್ಮೇಳನದ ಅಧಿವೇಶನದನ ನಂತರ ನೂತನ ಗೌರವ ಅಧ್ಯಕ್ಷರಾಗಿ ಕುರ್ಕಿ ದೇವರಾಜ್, ಅಧ್ಯಕ್ಷರಾಗಿ ಆಲಹಳ್ಳಿ ವೆಂಕಟೇಶ್, ಕಾರ್ಯದರ್ಶಿಯಾಗಿ ವಿ.ನಾರಾಯಣರೆಡ್ಡಿ ಸೇರಿದಂತೆ ೨೩ ಜನರ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.