ರೈತರಿಗೆ ನೀರಿನ ಸಮಸ್ಯೆಯಾಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ

ರಾಯಚೂರು,ಆ.೧೭-ಪ್ರಾದೇಶಿಕ ಆಯುಕ್ತರು, ಉಭಯ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಸಹಕಾರದೊಂದಿಗೆ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ನೀರಿನ ಪ್ರಮಾಣ ಕಾಯ್ದಿರಿಸಬೇಕು ಅಲ್ಲದೆ ರಾಯಚೂರು ಜಿಲ್ಲೆಯ ಕೆಳಭಾಗದ ಮಾನ್ವಿ, ಸಿರವಾರ ರಾಯಚೂರಿನ ಮೈಲ್ ೪೭, ೬೯, ೧೦೪ ರಲ್ಲಿ ನೀರಿನ ಪ್ರಮಾಣವನ್ನು ಸರಿಯಾಗಿ ಕಾಯ್ದಿರಿಸಿ ನೀರು ಸರಬರಾಜು ಮಾಡಲು ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದ್ದಾರೆ.
ಮುನಿರಾಬಾದನಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಂಸ್ಥೆ ಹಾಗೂ ನೀರಾವರಿ ಸಲಹಾ ಸಮಿತಿಯ ಅದ್ಯಕ್ಷರಾದ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ನವೆಂಬರ್ ತಿಂಗಳವರೆಗೆ ಪ್ರತಿದಿನ ೪೧೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ನೀರಿನ ಪ್ರಮಾಣವನ್ನು ಕಾಯ್ದಿರಿಸಿ ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕೆಂದು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ನೀರು ಬಿಡುಗಡೆ ಮಾಡಿ ವಾರವಾದರು ಸರಿಯಾಗಿ ಕೆಳಭಾಗದ ಮಾನ್ವಿ, ಸಿರವಾರ, ರಾಯಚೂರಿಗೆ ನೀರು ಸರಬರಾಜಾಗುತ್ತಿಲ್ಲ ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಅಧಿಕಾರಿಗಳು ಜವಾಬ್ದಾರಿಯಿಂದ ಮೈಲ್ ಗಳಲ್ಲಿ ನೀರಿನ ಪ್ರಮಾಣ ಕಾಯ್ದಿರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಅನುಗುಣವಾಗಿ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ರೈತರು ಸಂಕಷ್ಟ ಅನುಭವಿಸಲಿದ್ದಾರೆ ಜವಾಬ್ದಾರಿಯಿಂದ ನೀರಿನ ಪ್ರಮಾಣ ಕಾಯ್ದಿರಿಸುವುದು ಸೇರಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಲ್ಲಿ ನೀರು ಸರಬರಾಜು, ನೀರಾವರಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಗೂ ಮುನ್ನ ರೈತರು, ರೈತ ಮುಖಂಡರು ಸಚಿವರುಗಳಿಗೆ ಮನವಿ ಮಾಡಿ, ಅಕ್ರಮ ನೀರು ಕಳ್ಳತನ ತಡೆಗಟ್ಟಬೇಕು,ಕೆಳಭಾಗಕ್ಕೆ ಸರಿಯಾಗಿ ನೀರು ಸರಬರಾಜಾಗದಿದ್ದರೆ ನಾವು ಬೆಳೆಯುವ ಬೆಳಗಳ ಫಸಲು ಕೈತಪ್ಪಿ ಸಂಕಷ್ಟ ಅನುಭವಿಸುವಂತಾಗುತ್ತದೆ ಕಾರಣ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸೂಚಿಸಬೇಕೆಂದು ಸಭೆಗೂ ಮುನ್ನ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಬಿ ನಾಗೇಂದ್ರ, ಜನಾರ್ಧನ್ ರಡ್ಡಿ, ಸಂಗಣ್ಣ ಕರಡಿ, ಅಮರೇಶ್ವರ ನಾಯಕ್, ಸಂಸದ ದೇವೆಂದ್ರಪ್ಪ, ಶಾಸಕರಾದ ಹಂಪಯ್ಯ ನಾಯಕ್, ಬಸನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ಹಂಪನಗೌಡ ಬಾದರ್ಲಿ, ತುರವಿಹಾಳ ಬಸನಗೌಡ, ರಾಯಚೂರು ಜಿಲ್ಲಾಧಿಕಾರಿಗಳಾದ ಚಂದ್ರಶೇಖರ್, ಶರಣಗೌಡ ಬಯ್ಯಾಪೂರ, ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ್ ಸೇರಿ ಅನೇಕರು ಉಪಸ್ಥಿತರಿದ್ದರು.