ದಾವಣಗೆರೆ.ಮೇ.೨೭; ಕಾಂಗ್ರೆಸ್ ಸರ್ಕಾರ ರಾಜ್ಯದ ರೈತ ಸಮುದಾಯಕ್ಕೆ ನೀಡಿದ್ದ ಚುನಾವಣಾ ಭರವಸೆಗಳನ್ನು ತತಕ್ಷಣ ಈಡೇರಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕಿಸಾನ್ ಸಭಾ ಅಧ್ಯಕ್ಷ ಹೆಚ್.ಜಿ ಉಮೇಶ್ ಆವರಗೆರೆ ಮಾತನಾಡಿ ರಾಜ್ಯದಲ್ಲಿ ಜಾರಿ ಮಾಡಿದ್ದ ಎಲ್ಲಾ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯುವ ಬಗ್ಗೆ ಅಗತ್ಯ ಸುಗ್ರೀವಾಜ್ಞೆ ಹೊರಡಿಸಬೇಕು.ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಕೆ, ಕೃಷಿ ಬಡ್ಡಿರಹಿತ ಸಾಲದ ಮಿತಿಯನ್ನು 3 ರಿಂದ 10 ಲಕ್ಷರೂಗಳಿಗೆ ಏರಿಕೆ, ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆ ವಿಸ್ತರಣೆಯಂತಹ ಭರವಸೆಗಳನ್ನು ಆದ್ಯತೆ ಮೇರೆಗೆ ಕೂಡಲೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಅಗತ್ಯ ಆದೇಶ ನೀಡಬೇಕು.ಉಳಿಮೆ ಹಕ್ಕನ್ನು ಸರ್ಕಾರಿ ಭೂಮಿಯ ಗೇಣಿದಾರಿಕೆ ಎಂದು” ಪರಿಗಣಿಸಿ ಅವರನ್ನು ಒಕ್ಕಲಿಬ್ಬಿಸುವುದು, ಖಾಲಿ ಮಾಡಿಸುವುದು, ಭೂಸ್ವಾಧೀನ ಪಡಿಸುವುದನ್ನು ತಡೆಯುವಂತಹ ಸೂಕ್ತ ಕಾನೂನು ರಕ್ಷಣೆ ನೀಡಿ, ಹೊಸ ಮಾನದಂಡ ನಿಗದಿ ಪಡಿಸಿ ಅರ್ಜಿ ಸ್ವೀಕರಿಸಿ ಹಕ್ಕುಪತ್ರ ನೀಡುವ ನೀತಿಯನ್ನು ರೂಪಿಸಬೇಕು ಎಂದರು. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ 11 ಜಿಲ್ಲೆಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಉಂಟಾಗಿರುವ ಸಮಸ್ಯೆಗಳಾದ ಬಫರ್ ಜೋನ್, ಪರಿಸರ ಸೂಕ್ಷ್ಮವಲಯ, ಮೂಲಭೂತ ಸೌಕರ್ಯ ಅಭಿವೃದ್ಧಿ ತಡೆ ಇತ್ಯಾದಿ ಮಾನವ ಹಕ್ಕುಗಳ ವಿಚಾರಗಳನ್ನು ಪುನರ್ ಪರಿಶೀಲಿಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು ಹಾಗೂ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಸುದ್ದಿಗೋಷ್ಠಿಯಲ್ಲಿ ಐರಣಿ ಚಂದ್ರು,ಭೀಮಾರೆಡ್ಡಿ,ಕುಂದುವಾಡ ಚಂದ್ರಪ್ಪ,ನರೇಗಾ ರಂಗನಾಥ್,ಸಿದ್ದಲಿಂಗಪ್ಪ ಹಾಲೇಕಲ್ಲು,ಎ.ತಿಪ್ಪೇಸ್ವಾಮಿ, ಬಾನಪ್ಪ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಬಾಕ್ಸ್ ;
ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಕಾರ್ಡ್ ನ ಭರವಸೆಗಳನ್ನು ಈ ಕೂಡಲೇ ಈಡೇರಿಸಬೇಕು.ಈಗಾಗಲೇ ಗ್ಯಾರಂಟಿ ಕಾರ್ಡ್ ನ ಭರವಸೆಗಳಿಂದ ಜನರಲ್ಲಿ ಗೊಂದಲಗಳು ಸೃಷ್ಠಿಯಾಗುತ್ತಿವೆ.ವಿದ್ಯುತ್ ಬಿಲ್ ಪಾವತಿ ಹಾಗೂ ಬಸ್ ಗಳಲ್ಲಿ ಉಚಿತ ಪ್ರಯಾಣ ಕುರಿತಾದ ಅನೇಕ ಸಮಸ್ಯೆಗಳಾಗುತ್ತಿವೆ ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಲ್ಲಾ ಗೊಂದಲಗಳನ್ನು ನಿವಾರಿಸಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು.
– ಹೆಚ್.ಜಿ ಉಮೇಶ್ ಆವರಗೆರೆ