ಮುಂಗಾರು ಕೃಷಿ ಪರಿಕರಗಳ ದಾಸ್ತಾನು
ದೇವದುರ್ಗ,ಜು.೧೦-
ತಾಲ್ಲೂಕಿನ ಜಾಲಹಳ್ಳಿ ಪಟ್ಟಣದ ರೈತರಿಗೆ ಈಗಾಗಲೇ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ತುಂತುರು ಹನಿ ನೀರಾವರಿ ವ್ಯವಸ್ಥೆಗೆ ಪೈಪ್‌ಗಳನ್ನು ವಿತರಿಸಲಾಗಿದೆ ಎಂದು ದೇವದುರ್ಗ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಬಸವರಾಜ ಸಿದ್ದನಗೌಡ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೊಗರಿ ಬಿತ್ತನೆ ಬೀಜ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು. ಜಾಲಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಇಲ್ಲಿಯವರೆಗೆ ೩೬ ಕ್ವಿಂಟಲ್ ಭತ್ತದ ಬೀಜ, ೧೨೦ ಕ್ವಿಂಟಲ್ ತೊಗರಿ ಬಿತ್ತನೆ ಬೀಜ,೬ ಕ್ವಿಂಟಲ್ ಸಜ್ಜೆ, ೧ ಕ್ವಿಂಟಲ್ ಹೆಸರು ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. ಈಗಾಗಲೇ ಬಹುತೇಕ ರೈತರು ತಮ್ಮ ಹೆಸರಲ್ಲಿರುವ ದಾಖಲೆಗಳನ್ನು ನೀಡಿ ಸಬ್ಸಿಡಿಯಡಿ ಬಿತ್ತನೆ ಬೀಜ ಖರೀದಿಸಿದ್ದಾರೆ’ ಎಂದರು.
ತುಂತುರು ಹನಿ ನೀರಾವರಿಗಾಗಿ ಪೈಪ್‌ಗಳಿಗಾಗಿ ೯೩೫ ರೈತರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕೇವಲ ೧೯೪ ರೈತರಿಗೆ ಪೈಪ್‌ಗಳು ಬಂದಿವೆ. ಉಳಿದ ೭೪೧ ರೈತರಿಗೆ ವಿತರಣೆ ಮಾಡಬೇಕಾದ ಪೈಪ್‌ಗಳು ಬಂದಿಲ್ಲ. ಇಲಾಖೆಗೆ ಸರಬರಾಜು ಮಾಡುವ ಸಂಸ್ಥೆಗೆ ತಮ್ಮ ಇಲಾಖೆಯಿಂದ ಸಹಾಯಧನ ಜಮೆ ಆಗದೆ ಇರುವುದರಿಂದ ಸಂಸ್ಥೆಯವರು ಪೈಪ್‌ಗಳನ್ನು ಸರಬರಾಜು ಮಾಡಿಲ್ಲ’ ಎಂದರು.
ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಶೀಘ್ರವೇ ರೈತರಿಗೆ ಪೈಪ್‌ಗಳನ್ನು ವಿತರಿಸಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಇಲಾಖೆಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ. ಪ್ರತಿಯೊಂದು ಚೀಲದ ಮೇಲೆ ಬಾರ್ ಕೋಡ್ ಇರುವುದರಿಂದ ರೈತರ ಅಧಾರ್ ಚೀಟಿ, ಸಣ್ಣ ರೈತರ ಜಮೀನು ಹೊಂದಿರುವ ದಾಖಲೆ ಇದ್ದರೆ ಮಾತ್ರ ವಿವಿಧ ಬಿತ್ತನೆ ಬೀಜ ಸೇರಿದಂತೆ ಯಾವುದೇ ಸೌಲಭ್ಯ ವಿತರಣೆ ಮಾಡಲು ಸಾಧ್ಯ’ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ರಂಗಪ್ಪ ನಾಯ್ಕ್, ಲೆಕ್ಕಾಧಿಕಾರಿ ಉತ್ತೇಶ್, ಸಿಬ್ಬಂದಿಗಳಾದ ಸಂತೋಷ್ ಕುಮಾರ, ಅಲ್ಲಿಸಾಬ್, ಮಲ್ಲಿಕಾರ್ಜುನ ಕುಂಬಾರ್ ಇದ್ದರು.
ರೈತರಿಗೆ ತೊಗರಿ ಬಿತ್ತನೆ ಬೀಜ ವಿತರಣೆಜಾಲಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯಕ್ರಮ ಇಲಾಖೆಯಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಲಾಗುವುದು. ರೈತರು ದಲ್ಲಾಳಿಗಳನ್ನು ಕರೆತರದೇ ರೈತರು ಸ್ವತಃ ರೈತ ಸಂಪರ್ಕ ಕೇಂದ್ರಕ್ಕೆ ಬರಬೇಕು.
-ಬಸವರಾಜ ಸಿದ್ದರೆಡ್ಡಿ
ಕೃಷಿ ಸಹಾಯಕ ನಿರ್ದೇಶಕ, ದೇವದುರ್ಗ.