ರೈತರಿಗೆ ತೊಂದರೆಯಾಗದಂತೆ ನೀರು ಪೂರೈಕೆಗೆ ಕ್ರಮ : ಆನಂದ್ ಸಿಂಗ್

ಬಳ್ಳಾರಿ ನ.22 :ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡಮತ್ತು ಬಲ ದಂಡೆ ಕಾಲುವೆಗಳ ವ್ಯಾಪ್ತಿಯ ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ  ಬೇಸಿಗೆ ಬೆಳೆಗೆ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು  ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದದ್ದಾರೆ
ಅವರು ನಿನ್ನೆ  ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ತುಂಗಭದ್ರಾ 114ನೇ ನೀರಾವರಿ ಸಲಹಾ ಸಮಿತಿ ಸಭೆಯನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬೇಸಿಗೆ ಬೆಳೆಗೆ ನೀರು ಬಿಡುವ ಕುರಿತು ಮಾಹಿತಿ ನೀಡುತ್ತ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಗೆ ಡಿಸೆಂಬರ್. 01 ರಿಂದ 10 ರವರೆಗೆ 10 ದಿನಗಳಿಗೆ ನೀರು ನಿಲುಗಡೆ.  ಡಿ. 11 ರಿಂದ 20 ರವರೆಗೆ 750 ಕ್ಯೂಸೆಕ್ಸನಂತೆ 10 ದಿನಗಳಿಗೆ, ಡಿ. 21 ರಿಂದ 31 ರವರೆಗೆ 11 ದಿನಗಳಿಗೆ ನೀರು ನಿಲುಗಡೆ.  2021ರ ಜನವರಿ. 01 ರಿಂದ 15 ರವರೆಗೆ 770 ಕ್ಯೂಸೆಕ್ಸನಂತೆ 15 ದಿನಗಳಿಗೆ ಕಾಲುವೆಯಡಿ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದರು.

 ಬಲದಂಡೆ ಕೆಳಮಟ್ಟದ (ಎಲ್ ಎಲ್ ಸಿ) ಕಾಲುವೆಗೆ ಡಿ. 01 ರಿಂದ 25 ರವರೆಗೆ 250 ಕ್ಯೂಸೆಕ್ಸನಂತೆ 25 ದಿನಗಳಿಗೆ, ಡಿ. 26 ರಿಂದ 31 ರವರೆಗೆ 660 ಕ್ಯೂಸೆಕ್ಸನಂತೆ 100 ದಿನಗಳಿಗೆ ದಿನಾಂಕ ಏಪ್ರಿಲ್. 01 ರಿಂದ 10 ರವರೆಗೆ 200 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. .ರಾಯ ಬಸವಣ್ಣ ಕಾಲುವೆಗೆ 2021ರ ಜನವರಿ. 15 ರವರೆಗೆ 61 ದಿನಗಳಿಗೆ ನೀರು ನಿಲುಗಡೆ.  ಜನವರಿ. 16 ರಿಂದ ಮೇ. 31 ರವರೆಗೆ 180 ಕ್ಯೂಸೆಕ್ಸನಂತೆ 136 ದಿನಗಳಿಗೆ ರವರೆಗೆ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ
ಸಭೆಯಲ್ಲಿ ಕೃಷಿ ಸಚಿವ  ಬಿ.ಸಿ ಪಾಟೀಲ್ ಅವರು ಮಾತನಾಡಿ, ನಮ್ಮ ರೈತರು ಭತ್ತದ ಬೆಳೆ ಒಂದನ್ನೇ ಬೆಳೆಯದೇ ಪ್ರತಿ ವರ್ಷ ಒಂದೊಂದು ಬೆಳೆಗಳನ್ನು ಬದಲಾಯಿಸಿ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆಯಬೇಕು.  ಇದರಿಂದ ಭೂಮಿಯ ಫಲವತ್ತತೆ ನಾಶವಾಗದೇ ಇಳುವರಿಯೂ ಹೆಚ್ಚುತ್ತದೆ.  ಆದರೆ, ಈ ಭಾಗದ ರೈತರು ಹೆಚ್ಚಾಗಿ ಭತ್ತವನ್ನು ಪ್ರತಿ ಬಾರಿ ಬೆಳೆಯುತ್ತಿರುವುದರಿಂದ ನೀರಿನ ಸಮಸ್ಯೆ ಮಾತ್ರವಲ್ಲ ಭೂಮಿಯ ಫಲವತ್ತತೆಯೂ ಕಡಿಮೆ ಯಾಗುತ್ತದೆ.  ರೈತರು ತಮ್ಮ ಭೂಮಿಯ ಫಲವತ್ತತೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಅಂದಾಗ ಮಾತ್ರ ಭೂಮಿಯನ್ನು ದೀರ್ಘ ಕಾಲದವರೆಗೆ ಸಂರಕ್ಷಿಸಬಹುದು ಎಂದು ಹೇಳಿದರು.
ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಾತನಾಡಿ, ಈ ಬಾರಿ ಅತಿಯಾಗಿ ಮಳೆಯಾಗಿರುವುದರಿಂದ ತುಂಗಭದ್ರಾ  ಎಡದಂಡೆ ಕಾಲುವೆ ಭಾಗಗಳಲ್ಲಿ ಬಿತ್ತನೆ ತಡವಾಗಿ ಮಾಡಲಾಗಿದೆ.  ಮಸ್ಕಿ ಮತ್ತು ಜವಳಗೇರಾ ಉಪ ವಿಭಾಗದಲ್ಲಿ ಜೋಳ, ಸೂರ್ಯಕಾಂತಿ ಹೆಚ್ಚಾಗಿ ಬಿತ್ತನೆಯಾಗಿರುವುದರಿಂದ ಜನವರಿ. 15 ರವರೆಗೆ ನೀರು ಬೇಕಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ.  ಹಾಗಾಗಿ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿರಗುಪ್ಪಾ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಕಂಪ್ಲಿ ಶಾಸಕ ಜೆ.ಎನ್ ಗಣೇಶ, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ, ಕೊಪ್ಪಳ ಎಸ್.ಪಿ ಟಿ.ಶ್ರೀಧರ್, ರಾಯಚೂರು ಎಸ್.ಪಿ ನಿಕಮ್ ಪ್ರಕಾಶ ಅಮ್ರಿತ್ ಹಾಗೂ ಮುನಿರಾಬಾದ್ ಕಾಡಾ ಕಚೇರಿಯ ಮುಖ್ಯ ಇಂಜಿನಿಯರ್ ಎಸ್.ಹೆಚ್.ಮಂಜಪ್ಪ, ಅಧೀಕ್ಷಕ ಅಭಿಯಂತರರಾದ ಬಸವರಾಜ ಹಾಗೂ ಪ್ರಕಾಶ, ವಡ್ಡರಹಟ್ಟಿ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ ವಲ್ಲಾಪುರ ಮೊದಲಾದವರು  ಇದ್ದರು.