ರೈತರಿಗೆ ಋಣಮುಕ್ತ ಪತ್ರ ನೀಡಿ

ಅರಸೀಕೆರೆ, ಡಿ. ೨೦- ರಾಜ್ಯದ ಹಲವು ಬ್ಯಾಂಕ್‌ಗಳು ರೈತರಿಗೆ ಋಣಮುಕ್ತ ಪತ್ರವನ್ನು ನೀಡುತ್ತಿಲ್ಲ ಎಂದು ರೈತ ಸಂಘದ ರಾಜ್ಯ ಸಂಚಾಲಕ ಪ್ರಸನ್ನಕುಮಾರ್ ಹೇಳಿದರು.
ತಾಲ್ಲೂಕಿನ ಗಂಡಸಿ ಹೋಬಳಿ ಯಡವನಹಳ್ಳಿಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಅಧಿಕಾರಿಗಳನ್ನು ಕೇಳಿದರೆ ಬ್ಯಾಂಕ್‌ಗಳು ಬೇರೆ ಬೇರೆ ಬ್ಯಾಂಕ್‌ನೊಂದಿಗೆ ವೀಲಿನವಾಗಿರುವುದರಿಂದ ಸ್ವಲ್ಪ ತೊಂದರೆಯಾಗುತ್ತಿದೆ. ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದ ರೈತರಿಗೆ ಋಣಮುಕ್ತ ಪತ್ರ ದೊರೆಯದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಗಂಡಸಿ ಹೋಬಳಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತಿದ್ದೇವೆ. ರಾಜ್ಯ ಸರ್ಕಾರ ರೈತರ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಂದ ತಕ್ಷಣವೇ ಋಣಮುಕ್ತ ಪತ್ರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯಡವನಹಳ್ಳಿ ರೈತರು ಮತ್ತು ಮುಖಂಡರು ಉಪಸ್ಥಿತರಿದ್ದರು.