ರೈತರಿಗೆ ಉಚಿತ ಬೀಜ, ರಸಗೊಬ್ಬರ ಪೂರೈಕೆಗೆ ಆಗ್ರಹ

ಕಲಬುರಗಿ,ಜೂ.4-ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಈ ಬಾರಿ ರೈತರಿಗೆ ಉಚಿತ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಫರತಾಬಾದ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿರುವ ಅವರು, ಇದೀಗ ಮಳೆಗಾಲ ಆರಂಭವಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಸುಲಭವಾಗಿ ಬಿತ್ತನೆ ಪರಿಕರಗಳು ಸಿಗುವಂತೆ ಮಾಡಬೇಕು, ಲಾಕ್ ಡೌನ್ ಪ್ರಯುಕ್ತ ಬಿತ್ತನೆ ಪರಿಕರ ಖರೀದಿಸಲು ರೈತರಿಗೆ ತೊಂದರೆಯಾಗುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ಬಿತ್ತನೆ ಪರಿಕರ ಅಂಗಡಿಗಳನ್ನು ತೆರೆಯಲು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕಾಲಾವಕಾಶ ನೀಡಬೇಕು. ಇದರಿಂದ ರೈತರು ಬಿತ್ತನೆ ಪರಿಕರ ಖರೀದಿಸಲು ಅನುಕೂಲಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ನಿಗಾವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಂಬು ಮಸ್ತಿ, ಸತೀಶ ಪರತಾಬಾದ, ಅಕ್ಷಯ, ರವಿ ವಳಕೇರಿ, ರಾಹುಲ್ ಫರತಾಬಾದ, ಸುನೀಲ ಚವ್ಹಾಣ ಹಾಗೂ ಮತ್ತಿತರರು ಇದ್ದರು.