ರೈತರಿಗೆ ಉಚಿತ ಬಿತ್ತನೆ ಬೀಜ ರಸಗೊಬ್ಬರ ವಿತರಿಸುವಂತೆ ಸಿರಗಾಪೂರ ಆಗ್ರಹ

ಕಲಬುರಗಿ:ಮೇ.30: ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು,ಸರಕಾರ ಮುಂಗಾರು ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಡೀ ರಾಜ್ಯದಲ್ಲೇ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ.ಈ ಮಧ್ಯೆ ಕಲಬುರಗಿ ಜಿಲ್ಲೆಯ ಪ್ರಮುಖ ಬೆಳೆ ತೊಗರಿಗೆ ನೆಟೆ ರೋಗ ಹತ್ತಿಕೊಂಡು ಗಣನೀಯವಾಗಿ ಇಳುವರಿ ಕಡಿಮೆಯಾಗಿದ್ದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.ಬಿತ್ತನೆಗೆ ಖರ್ಚು ಮಾಡಿದ ಅರ್ಧದಷ್ಟು ಹಣ ರೈತರ ಕೈ ಸೇರಿಲ್ಲ.ಇನ್ನು ಬೆಳೆ ಹಾನಿಗೆ ನೀಡಿರುವ ಪರಿಹಾರದ ಹಣ ಸಾಕಷ್ಟು ರೈತರ ಖಾತೆಗೆ ಬಂದಿಲ್ಲ.ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ.ಆದರೆ ಇಲ್ಲಿಯೂ ಕೂಡ ವಿಮಾ ಕಂಪನಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿವೆ.ಶೆ.35 ರಷ್ಟು ರೈತರಿಗೆ ವಿಮೆ ಹಣ ಬರಬೇಕಾಗಿದೆ.ವಿಳಂಬದಿಂದ ರೈತರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಜನರಿಗೆ ಅನೇಕ ಉಚಿತ ಭಾಗ್ಯಗಳನ್ನು ನೀಡಲು ಮುಂದಾಗಿದೆ.ಇದನ್ನು ಸ್ವಾಗತಿಸುತ್ತೆವೆ.ಆದರೆ ದೇಶದ ಬೆನ್ನೆಲುಬು,ಅನ್ನ ನೀಡುವ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಸಂಕಷ್ಟವೇಕೆ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಲಬುರಗಿ ಜಿಲ್ಲೆಯ ಸಚಿವರಾದ ಪ್ರಿಯಾಂಕಾ ಖರ್ಗೆ ಅವರಿಗೆ ರೈತರ ಬಗ್ಗೆ ಕಾಳಜಿ ಇದೆ.ಹೀಗಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ರೈತರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ರೈತರಿಗೆ ಸಂಪೂರ್ಣ ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ವಿತರಿಸುವಂತೆ ರೈತ ಸಂಪರ್ಕ ಕೇಂದ್ರಗಳಿಗೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.