ರೈತರಿಗೆ ಉಂಟಾಗುತ್ತಿರುವ ತೊಂದರೆಗಳ ಸರಿಪಡಿಸಲು ಆಗ್ರಹ


ದಾವಣಗೆರೆ.ನ.೧೪ : ವಾಸ್ತವವಾಗಿ ಜಮೀನಿನಲ್ಲಿ ಇರಬೇಕಾದ ವಿಸ್ತೀರ್ಣಕ್ಕಿಂತ 1ಎಕರೆ ಹೆಚ್ಚುವರಿ ಜಮೀನು  ತೋರಿಸಿ ಆರ್ ಟಿಸಿ, ಆಕಾರ್ ಬಂದ್ ಮಾಡಿದ್ದು, ಇದರಿಂದಾಗಿ ದಾಖಲೆಗಳು ತಾಳೆಯಾಗದೆ ರೈತರಿಗೆ ಅನಾನುಕೂಲ ಉಂಟಾಗಿದೆ. ಇದನ್ನು ಮುಂಬರುವ ಡಿಸೆಂಬರ್15ರೊಳಗೆ  ಸರಿಪಡಿಸದಿದ್ದಲ್ಲಿ ಎಸಿ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡ ಬುಳ್ಳಾಪುರದ ಹನುಮಂತಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲ್ಲೂಕು ಆನಗೋಡು ಹೋಬಳಿ ಬುಳ್ಳಾಪುರ ಗ್ರಾಮದ ಸರ್ವೇ ನಂಬರ್ 18/1ರಲ್ಲಿ 13-27ಎಕರೆ ಜಮೀನಿನ ಪಹಣಿಯಲ್ಲಿ ಇಂಡೀಕರಣ ಮಾಡದೆ ಇರುವ ಉಪ ವಿಭಾಗಾಧಿಕಾರಿಗಳ ಕಾರ್ಯ ವೈಖರಿಯ ವಿರುದ್ಧ ಡಿಸೆಂಬರ್ 15ರ ವರೆಗೆ ಗಡುವು ನೀಡಲಾಗಿದೆ. ನಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆ ವೇಳೆ ಯಾವುದೇ ಅನಾಹುತ ನಡೆದರೆ ಇದಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.ಬುಳ್ಳಾಪುರ ಗ್ರಾಮದ ತಿಮ್ಮೇಶ್ ಎಂಬವರ ಹೆಸರಿನಲ್ಲಿ 6-20 ಎಕರೆ ಜಮೀನು ಇದ್ದು, ಆದರೆ ಆರ್ ಟಿಸಿಯಲ್ಲಿ 7-20 ನಮೂದಾಗಿದೆ. ಇದರಿಂದಾಗಿ ಆರ್ ಟಿಸಿ ಮತ್ತು ಆಕಾರ್ ಬಂದ್ ತಾಳೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಯಾವುದೇ ರೀತಿಯ ವ್ಯವಹಾರ ಮಾಡದಂತೆ ಅನಾನುಕೂಲ ಉಂಟಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.ಆಕಾರ್ ಬಂದ್ ಗಿಂತ 1 ಎಕರೆ ಹೆಚ್ಚುವರಿಯಾಗಿ ಬಂದಿರುವ ದಾಖಲೆಯನ್ನು ತಿದ್ದುಪಡಿ ಮಾಡಿ ಕೊಡುವಂತೆ ಈಗಾಗಲೇ 7-8 ವರ್ಷಗಳಿಂದ ಅಲೆದಾಡಿದರೂ ಸಹ ಯಾವುದೇ ಪಾರೆಕಟ್ ಪಾಲು ವಿಭಾಗ ಮಾಡಲು ಸಾಧ್ಯ ಆಗಿಲ್ಲ ಇದರಿಂದಾಗಿ ನಮಗೆ ತೊಂದರೆಯುಂಟಾಗಿದೆ ಎಂದು ರೈತ ತಿಮ್ಮೇಶ್ ಅಳಲು ತೋಡಿಕೊಂಡರು.ಮನೆಯಲ್ಲಿ ಇದೀಗ ಹಲವಾರು ಶುಭಮುಹೂರ್ತಗಳನ್ನು ಹಮ್ಮಿಕೊಂಡಿದ್ದು ಹಣಕ್ಕಾಗಿ ಹೊಲ ಮಾರಲು ಹೋದರೆ ಯಾರೂ ಕೊಳ್ಳಲು ಮುಂದೆ ಬರುತ್ತಿಲ್ಲ. ಕಾರಣ ದಾಖಲೆಗಳು ಸರಿ ಇಲ್ಲದ ಕಾರಣ ಮಾರಾಟ ಮಾಡಲು ಬರುವುದಿಲ್ಲ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ಮನೋಭಾವ ತೋರಿದರೆ ಕುಟುಂಬ ಸಮೇತರಾಗಿ ಎಸಿ ಕಚೇರಿ ಮುಂದೆ ವಿಷ ಪ್ರಾಷಣ ಮಾಡಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು .ಸುದ್ದಿಗೋಷ್ಠಿಯಲ್ಲಿ ಪರಮೇಶ್ವರಪ್ಪ, ನಾಗರಾಜಪ್ಪ, ಕರಿಬಸಪ್ಪ, ಬಸವರಾಜಪ್ಪ ಇತರರು ಇದ್ದರು.