ರೈತರಿಗೆ ಅನುಕೂಲಕರ ದರ ನಿಗದಿಗೆ ಕ್ರಮ: ಎಡಿಸಿ ದುರುಗೇಶ್

ರಾಯಚೂರು,ಏ.೨೭-ವಾಡಿ-ಗದಗ್ ರೈಲು ಮಾರ್ಗಗಳ ಜೋಡಣೆಗಾಗಿ ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಸುಮಾರು ೧೫೫ ಎಕರೆ ೨೮ ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದ್ದು, ರೈತರಿಗೆ ಅನುಕೂಲಕರವಾಗುವ ಉತ್ತಮ ದರ ನಿಗದಿಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ್ ಅವರು ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಡಿ- ಗದಗ ರೈಲು ಮಾರ್ಗ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿದ ಜಮೀನುಗಳಿಗೆ ೨೯(೨) ರ ಭೂಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೂಸ್ವಾಧೀನಕ್ಕಾಗಿ ರೈತರಿಗೆ ಉತ್ತಮ ರೀತಿಯ ಬೆಲೆ ನೀಡಲಾಗುವುದು, ಭೂಮಿ ಕಳೆದುಕೊಳ್ಳುವ ಸಂತ್ರಸ಼ರಿಗೆ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಲಿಯಿರುವ ಉದ್ಯೋಗ ಭರ್ತಿಯಲ್ಲಿ ಮೀಸಲಾತಿ ಪಡೆಯಬಹುದಾಗಿದೆ, ಸಂತ್ರಸ್ಥರು ಪುನಃ ಭೂಮಿಯನ್ನು ಖರೀದಿ ಮಾಡಿ ನೋಂದಣೆ ಮಾಡಿಕೊಳ್ಳಲು ನೋಂದಣೆ ಕಚೇರಿಯಲ್ಲಿ ಮುದ್ರಾಂಕ ಶುಲ್ಕ ವಿನಾಯಿತಿ ಸಿಗಲಿದೆ. ರೈಲ್ವೆ ಇಲಾಖೆಯಲ್ಲಿ ಸಂತ್ರಸ್ಥರಿಗೆ ಉದ್ಯೋಗ ನೀಡುವುದು ರೈಲ್ವೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ, ಲಿಂಗಸೂಗೂರು ತಾಲೂಕಿನಲ್ಲಿ ರೈಲ್ವೆ ಲೈನ್ ಜೋಡಣೆಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.
ಲಿಂಗಸೂಗೂರು ತಾಲೂಕಿನ ಬನ್ನಿಗೋಳ, ಚಿಕ್ಕಲದೊಡ್ಡಿ, ಪರಾಂಪೂರ ಹಾಗೂ ದೇವರಭೂಪರ ಗ್ರಾಮಗಳಲ್ಲಿ ಒಟ್ಟು ವಿಸ್ತೀರ್ಣ ೧೫೫ ಎಕರೆ ೨೮ ಗುಂಟೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ನಿಮ್ಮ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂತಿಮ ನಿರ್ಧಾರ ಅವರು ಕೈಗೊಳ್ಳುವರು ಎಂದರು.
ಈ ಸಭೆಯಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಅಶೋಕ ಈರುಳ್ಳಿ, ಮ್ಯಾನೇಜರ್ ಶರಣಬಸಪ್ಪ ಹಾಗೂ ರೈತರು ಉಪಸ್ಥಿತರಿದ್ದರು.