ರೈತರಿಗಾಗಿ ಸದಾ ಹೃದಯಮಿಡಿತ: ರಾಹುಲ್

ನವದೆಹಲಿ, ಜ. ೧- ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ತಮ್ಮ ಹೃದಯ ಇದೆಯೆಂದು ಕಾಂಗ್ರೆಸ್ ಮುಖಂಡ ಹಾಗೂ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಸ್ತುತ ವೈಯಕ್ತಿಕ ಕಾರಣಗಳಿಗಾಗಿ ವಿದೇಶ ಪ್ರವಾಸದಲ್ಲಿರುವ ಅವರು, ನ್ಯಾಯವಲ್ಲದ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನ್ನದಾತರ ಬೆಂಬಲಕ್ಕೆ ತಾವು ಸದಾ ನಿಲ್ಲುವುದಾಗಿ ತಿಳಿಸಿದ್ದಾರೆ.
ರಾಷ್ಟ್ರದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಟ್ವೀಟ್ ಸಂದೇಶದ ಮೂಲಕ ತಿಳಿಸಿರುವ ರಾಹುಲ್ ಗಾಂಧಿ ಅವರು, ಹೊಸವರ್ಷ ಆರಂಭವಾಗಿದೆ. ನಮ್ಮನ್ನು ರಕ್ಷಿಸಲು ತ್ಯಾಗ ಬಲಿದಾನ ಮಾಡಿರುವವರನ್ನು ನಾವು ಸ್ಮರಿಸಬೇಕಾಗಿದೆ. ನನ್ನ ಹೃದಯ ಪ್ರತಿಭಟನಾ ನಿರತ ರೈತರೊಂದಿಗೆ ಇದೆ ಎಂದು ಹೇಳಿದ್ದಾರೆ.
ನ್ಯಾಯವಲ್ಲದ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಹಾಗೂ ಕಾರ್ಮಿಕರ ಜೊತೆ ತಮ್ಮ ಹೃದಯ ಇದೆ, ಇವರೆಲ್ಲರಿಗೂ ಹೊಸವರ್ಷದ ಶುಭಾಶಯಗಳು ಎಂದು ಅವರು ತಿಳಿಸಿದ್ದಾರೆ.
ರೈತರ ಸಮಸ್ಯೆಗಳು ಹಾಗೂ ವಲಸೆ ಕಾರ್ಮಿಕರ ಬಗ್ಗೆ ಪದೇಪದೇ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಾ ಬಂದಿರುವ ರಾಹುಲ್ ಗಾಂಧಿ ಅವರು ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು.
ಡಿಸೆಂಬರ್ ೨೪ ರಂದು ಇತರ ನಾಯಕರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಇದೀಗ ಊಹಾತ್ಮಕ ಪ್ರಜಾತಂತ್ರ ವ್ಯವಸ್ಥೆಯಡಿ ಇದೆ ಎಂದು ಹೇಳಿದ್ದರು.
ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಸುತ್ತಮುತ್ತ ಗಡಿಗಳಲ್ಲಿ ಮುಷ್ಕರವನ್ನು ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ಕೈಬಿಡಬೇಕೆಂದು ಅವರು ಪಟ್ಟುಹಿಡಿದಿದ್ದಾರೆ.