
ನವದೆಹಲಿ,ಡಿ.28- ಕೇಂದ್ರ ಸರ್ಕಾರ ರೈತರಿಗಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರೈತರು ಕೂಡಾ ಹೊಸ ಅವಕಾಶಗಳನ್ನು ಬರಮಾಡಿಕೊಳ್ಳಲು ಸಿದ್ಧವಾಗಬೇಕು ಎಂದು ಅವರು ಹೇಳಿದ್ದಾರೆ.
ಕಿಸಾನ್ ರೈಲು ಮತ್ತು ಕೃಷಿ ಉಡಾನ್ ಸೇವೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೇ ರಾಜ್ಯದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರೈತರ ಬೆಳೆಗಳ ಸಂಸ್ಕರಣೆಗೆ ಆದ್ಯತೆ ಮೇರೆಗೆ ಶಿಥಲೀಕರಣ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರದ ಸಂಗೊಲಾ ದಿಂದ ಪಶ್ಚಿಮ ಬಂಗಾಳದ ಶಾಲಿಮರ್ ನಡುವೆ ಸಂಚರಿಸುವ 100ನೇ ಕಿಸಾನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿದ ಬಳಿಕ
ಮಾತನಾಡಿದ ಅವರು, ಕಿಸಾನ್ ರೈಲು ಸೇವೆ ಆರಂಭದಿಂದ ರೈತರ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ. ಕೃಷಿ ವಲಯದಲ್ಲಿ ಆರ್ಥಿಕ ಬೆಳವಣಿಗೆಗೂ ನೆರವಾಗಲಿದೆ.ಹೊಸ ರೈಲು ವ್ಯವಸ್ಥೆಯಿಂದಾಗಿ ಸರಕು ಸೇವೆಗಳ ಸರಪಳಿ ಪಟ್ಟಿ ಮತ್ತಷ್ಟು ಬಲಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಂಪದ ಯೋಜನೆಯಡಿ 6 ಸಾವಿರದ 500 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಮೆಘಾ ಫುಡ್ ಪಾರ್ಕ್, ಶಿಥಲೀಕರಣ ಮೂಲ ಸೌಕರ್ಯ ಸರಪಳಿ, ಕೃಷಿ ಸಂಸ್ಕರಣ ಕ್ಲಸ್ಟರ್ ಸೇರಿದಂತೆ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.ಆತ್ಮ ನಿರ್ಭರ ಅಭಿಯಾನ ಪ್ಯಾಕೇಜ್ ಯೋಜನೆಯಡಿ ಸೂಕ್ಷ್ಮ ಆಹಾರ ಸಂಸ್ಕರಣಾ ಕೈಗಾರಿಕೆಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ರೈಲ್ವೆ ಸಚಿವ ಪಿಯೋಷ್ ಗೋಯಲ್ ಮಾತನಾಡಿ, ಒಂದು ದೇಶ ಒಂದು ಮಾರುಕಟ್ಟೆಗೆ ಈ ಹೊಸ ವ್ಯವಸ್ಥೆ ಅನುವು ಮಾಡಿಕೊಡಲಿದೆ. ರೈತರು ಸ್ವಾವಲಂಬಿಗಳಾಗುವ ಜೊತೆಗೆ ಹಳ್ಳಿಗಳೂ ಸ್ವಾವಲಂಬಿಯಾಗಲು ಸಹಕಾರಿಯಾಗಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ಇದುವರೆಗೂ 99 ಕಿಸಾನ್ ರೈಲುಗಳು 14 ರಾಜ್ಯಗಳಲ್ಲಿ ಈಗಾಗಲೇ ಸಂಚರಿಸಿವೆ. ಇದು 100ನೇ ಕಿಸಾನ್ ರೈಲಾಗಿದೆ. ಈ ವರ್ಷ ಮಾರ್ಚ್ 25ರಿಂದ ಇಲ್ಲಿಯವರೆಗೂ ರೈಲಿನಲ್ಲಿ 51 ದಶಲಕ್ಷ ಆಹಾರ ಧಾನ್ಯಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಬರಾಜು ಮಾಡಲಾಗಿದೆ. ಇದುವರೆಗೂ ರೈಲು ಸಾಗಟದಲ್ಲಿ ಶೇಕಡ 80 ರಷ್ಟು ಅಧಿಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರೈತರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ. ಕಿಸಾನ್ ರೈಲು ಆರಂಭದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ರೈಲಿನಲ್ಲಿ ಬಹು ಸರಕುಗಳನ್ನು ಸಾಗಿಸುವ ಕಿಸಾನ್ ರೈಲಿನಲ್ಲಿ ಹೂಕೋಸು, ದೊಡ್ಡ ಮೆಣಸಿನಕಾಯಿ, ಎಲೆಕೋಸು, ನುಗ್ಗೆಕಾಯಿ, ಮೆಣಸಿನಕಾಯಿ, ಈರುಳ್ಳಿ, ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಬಾಳೆಹಣ್ಣು, ಸೀತಾಫಲ ಮತ್ತಿತರ ಹಣ್ಣುಗಳನ್ನು ಸಾಗಿಸಲು ನೆರವಾಗಲಿದೆ