ರೈತರಿಂದ ಹೆದ್ದಾರಿ ತಡೆ


(ಸಂಜೆವಾಣಿ ವಾರ್ತೆ)
ಮುಧೋಳ,ಜು.12 : ತಾಲೂಕಿನ ತಿಮ್ಮಾಪೂರದ ರನ್ನ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬನ್ನು ಕಳುಹಿಸಿದ್ದು, ಇದುವರೆಗೂ ಅವರಿಗೆ ಹಣ ಪಾವತಿಸಿಲ್ಲ. ಆದ್ದರಿಂದ ಈ ಕೂಡಲೇ ಹಣ ಪಾವತಿಸುವಂತೆ ಹಾಗೂ ಇನ್ನಿತರ ಕೆಲ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಮಳೆಯಾಗದೇ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಸಚಿವರು, ಜಿಲ್ಲಾಧಿಕಾರಿಗಳು ಸೇರಿ ರೈತ ಮುಖಂಡರೊಂದಿಗೆ ಸಭೆ ಆಯೋಜನೆ ಮಾಡಿ, ತಕ್ಷಣ ರನ್ನ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿರುವ ರೈತರ ಬಾಕಿ ಹಣ ಹಾಗೂ ಕಾರ್ಮಿಕರ ವೇತನ, ಸಾಗಾಣಿಕೆದಾರರ, ಕಬ್ಬು ಕಟಾವುದಾರರ ಬಿಲ್ ಸಂದಾಯ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ದುಂಡಪ್ಪ ಯರಗಟ್ಟಿ ಮಾತನಾಡಿ, ಈ ಬಾರಿ ಮಳೆಯಾಗದೇ ಇರುವುದರಿಂದ ನೀರಿನ ಅಭಾವ ಉಂಟಾಗಿದ್ದು, ಈಗಾಗಲೇ ನದಿ ಮೂಲಕ ನೀರನ್ನು ಬಿಡುಗಡೆ ಮಾಡಲಾಗಿದ್ದು, ಅದು ನದಿಪಾತ್ರದವರಿಗೆ ಮಾತ್ರ ಅನುಕೂಲವಾಗುತ್ತಿದ್ದು ಇನ್ನುಳಿದ ಜನರಿಗೆ ಕಿನಾಲ್‍ಗಳ ಮೂಲಕ ಈ ಕೂಡಲೇ ಜಲಾಶಯಗಳಿಂದ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ 2400 ಕ್ಯುಸೆಕ್ಸ್ ನೀರನ್ನು ನಾಳೆಯಿಂದಲೇ ಬಿಡುಗಡೆ ಮಾಡಿ ಸಾರ್ವಜನಿಕರಿಗೆ, ಜನಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಇನ್ನೋರ್ವ ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಮಳೆಯಿಲ್ಲದೇ ಎಲ್ಲ ಬೆಳೆಗಳು ಒಣಗಿದ್ದು, ಮುಧೋಳ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಮೂಲಕ ಬರಗಾಲ ಪೀಡಿತ ಪ್ರದೇಶವೆಂದು ಈಗ ನಡೆದಿರುವ ಅಧಿವೇಶನದಲ್ಲೇ ಘೋಷಣೆ ಮಾಡಬೇಕು. ಈಗ ನಡೆದಿರುವ ಅಧಿವೇಶದಲ್ಲಿ ಯಾರೂ ರೈತರ ಬಗ್ಗೆ ಕನಿಕರ, ಕಾಳಜಿಯನ್ನು ವ್ಯಕ್ತಪಡಿಸದೇ ಇರುವುದು ದುರದೃಷ್ಟಕರ. ಏಕೆಂದರೆ ಸಕಾಲದಲ್ಲಿ ಮಳೆಯಾಗದೇ ಕಬ್ಬುಗಳು ಹಾಗೂ ಇತರೆ ಬೆಳೆಗಳು ಒಣಗಿದ್ದು, ರೈತರು ಚಿಂತಾಜನಕ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಚರ್ಚಿಸದೇ ಇರುವುದು ರೈತರಿಗೆ ತೀವ್ರ ನಿರಾಶೆಯನ್ನುಂಟು ಮಾಡುತ್ತಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸ್ಪಂದಿಸಿ, ರೈತರ ಸಭೆ ಕರೆದು ಈ ಕೂಡಲೇ ಒಣಗಿರುವ ಕಬ್ಬಿನ ಸರ್ವೇ ಮಾಡಿಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಲ್ಲಿ ಸಕ್ಕರೆ ಸಚಿವರೊಂದಿಗೆ ಸೇರಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಸ್ಥಳಕ್ಕೆ ಬರುವವರೆಗೂ ಧರಣಿ ನಡೆಸಿದ ರೈತರು, ಅವರು ಬಂದ ನಂತರ ತಮ್ಮ ಬೇಡಿಕೆಗಳ ಮನವಿಯನ್ನು ಅವರಿಗೆ ಸಲ್ಲಿಸಿದರು.