ರೈತರಿಂದ ಹಣ ವಸೂಲಿ, ಅಧಿಕಾರಿಗಳು ಮೌನ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಏ.22:- ಎಪಿಎಂಸಿ ಆವರಣದಲ್ಲಿ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ಯೋಜನೆ ಅಡಿ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಬಳಿ ಒಂದು ಕ್ವಿಂಟಲ್ ಗೆ ? 100 ರೂಪಾಯಿಯನ್ನು ಹಮಾಲಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ ಭಾನುವಾರ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು.
ಇದೆ ವೇಳೆ ಕಾರ್ಮಿಕ ಮಂಜುನಾಥ್ ಮಾತನಾಡಿ ನಾವು ರೈತರಿಗೆ ಇಷ್ಟೇ ಹಣ ಕೊಡಬೇಕೆಂದು ಎಲ್ಲಿಯೂ ಬೇಡಿಕೆ ಇಟ್ಟಿಲ್ಲ, ರೈತರು ಕೊಟ್ಟ ಹಣದಲ್ಲಿಯೇ ನಾವು ಕೆಲಸ ಮಾಡುತ್ತಿದ್ದೇವೆ, ಗುತ್ತಿಗೆದಾರ ಇವತ್ತಿನವರೆಗೂ ನಮಗೆ ಯಾವುದೇ ಹಣವನ್ನು ನೀಡಿರುವುದಿಲ್ಲ , ಚೀಲ ಹೊಲೆಯುವ ದಾರ ಹಾಗೂ ದಬ್ಬಳಾವನ್ನು ರೈತರು ಕೊಡುತ್ತಿರುವ ಹಣದಲ್ಲಿಯೇ ಕೊಂಡುಕೊಳ್ಳುತ್ತಿದ್ದೇವೆ, ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಆರೋಪಿಸಿದರು.
ರೈತ ಕಾಳೇಗೌಡ ಮಾತನಾಡಿ ರೈತರು ಇಲ್ಲಿಗೆ ಬಂದು ಎರಡು ಮೂರು ದಿನಗಳಾಗಿ ನಮ್ಮ ರಾಗಿ ಒಳಗೆ ಹೋದರೆ ಸಾಕು ಎಂಬುವ ಉದ್ದೇಶದಿಂದ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ , ಆದರೆ ಇಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ, ತೂಕ ಮಾಡುವ ರೂಮಿನೊಳಗೆ ದಲ್ಲಾಳಿಗಳು ತುಂಬಿಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಲಾರಿಗಳನ್ನು ತೂಕ ಮಾಡಿಸುತ್ತಾರೆ, ಅಧಿಕಾರಿಗಳು ಸಹ ಅವರೊಂದಿಗೆ ಇರುತ್ತಾರೆ ಕೇಳಲು ಹೋದರೆ ನಮಗೆ ಸರಿಯಾದ ಮಾಹಿತಿ ನೀಡುವುದಿಲ್ಲ, ದಲ್ಲಾಳಿಗಳ ಸಮಸ್ಯೆಯಿಂದನೇ ರೈತರು ಎರಡು ಮೂರು ದಿನ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ, ದಳ್ಳಾಳಿಗಳ ಹಾವಳಿಯನ್ನು ತಪ್ಪಿಸುವವರೆಗೂ ರೈತರಿಗೆ ಗೋಳು ತಪ್ಪಿದ್ದಲ್ಲ ಎಂದು ಕಿಡಿಕಾರಿದ್ದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ ಮಾತನಾಡಿ ಮುಖ್ಯವಾಗಿ ಮೂಲ ಸೌಕರ್ಯಗಳಿಲ್ಲ, ಸ್ವಚ್ಛತೆ ನಿರ್ವಹಣೆ ಇಲ್ಲ, ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಹಾಗೂ ಹಮಾಲಿಗಳಿಗೆ ದೊಡ್ಡ ಮಟ್ಟದ ತೊಂದರೆಯಾಗುತ್ತಿದೆ, ಹಮಾಲಿಗಳ ಹೆಸರಿನಲ್ಲಿ ರೈತರಿಂದ ಹಣ ವಸೂಲಿ
ಮಾಡಲಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸದಿದ್ದರೆ, ಮುಂದಿನ ದಿನಗಳಲ್ಲಿ ರೈತರ ಪರವಾಗಿ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದರು.
ಆಹಾರ ಶಿರಸ್ತೆದಾರ್ ಸಣ್ಣಸ್ವಾಮಿ ಪ್ರತಿಕ್ರಿಯಿಸಿ ಹಮಾಲಿಗಳಿಗೆ ಗುತ್ತಿಗೆದಾರರು ಹಣ ನೀಡುತ್ತಿಲ್ಲ ಎಂಬ ವಿಚಾರವಾಗಿ ನಮಗೆ ಯಾವುದೇ ದೂರುಗಳು ಬಂದಿಲ್ಲ, ಆ ರೀತಿ ಸಮಸ್ಯೆ ಇದ್ದರೆ ನಮಗೆ ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.