ರೈತರಿಂದ ಸಂಭ್ರಮಾಚರಣೆ

ಲಕ್ಷ್ಮೇಶ್ವರ, ನ20: ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ರೈತರು ವಿಜಯೋತ್ಸವವನ್ನು ಆಚರಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ರೈತರು ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡರು. ಮಳೆಯನ್ನು ಲೆಕ್ಕಿಸದೆ ರೈತರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕ ಪಕ್ಷಾತೀತ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ್ ಹೊಗೆಸೊಪ್ಪಿನ ಅವರು, ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆದಿರುವುದು ರೈತರ ಹೋರಾಟಕ್ಕೆ ಸಂದ ಜಯ ಎಂದರು.
ರೈತರು ಸಂಘಟಿತರಾದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ ಅವರು, ಇನ್ನು ಮುಂದೆಯೂ ದೇಶದ ರೈತರು ಸಂಘಟಿತರಾಗಿ ಹೋರಾಟಕ್ಕೆ ಮುಂದಾದರೆ ಕೇಂದ್ರದಲ್ಲಿ ರೈತರ ಸರಕಾರವನ್ನು ತರಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಾನಂದ ಲಿಂಗಶೆಟ್ಟಿ, ಖಾನ್ ಸಾಬ್ ಮತ್ತಿತರರು ಇದ್ದರು.