ರೈತರಿಂದ ರೈಲು ತಡೆ ಕೇಂದ್ರಕ್ಕೆ ಬಿಸಿ

ನವದೆಹಲಿ,ಮಾ.೧೦- ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಮಾರ್ಗ ನೀಡುವುದು, ಡಾ.ಸ್ವಾಮಿನಾಥನ್ ವರದಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿ ಚಲೋ ಹೋರಾಟ ಮುಂದುವರಿಸಿರುವ ನಡುವೆಯೇ ಇಂದು ದೇಶಾದ್ಯಂತ ‘ರೈಲ್ ರೋಕೋ’ ಆಂದೋಲನ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.ದೇಶಾದ್ಯಂತ ನಾಲ್ಕು ಗಂಟೆಗಳ ಕಾಲ ರಾಷ್ಟ್ರವ್ಯಾಪಿ ‘ರೈಲ್ ರೋಕೋ’ ಆಂದೋಲನ ನಡೆಸಿದ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧ್ಯಾಹ್ನ ೧೨ ರಿಂದ ೪ ಗಂಟೆಯವರೆಗೆ ರೈಲು ತಡೆ ನಡೆಸಿದರು.
ರಾಷ್ಟ್ರವ್ಯಾಪಿ ‘ರೈಲ್ ರೋಕೋ’ ಆಂದೋಲನದಿಂದ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಸುಮಾರು ೬೦ ಸ್ಥಳಗಳಲ್ಲಿ ನೂರಾರು ರೈತರು ಪ್ರತಿಭಟನೆಗೆ ಸಾಕ್ಷಿಯಾಗಿದೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಲವು ರೈಲು ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಗಳಿವೆ.
ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ ‘ರೈಲ್ ರೋಕೋ’ ಪ್ರತಿಭಟನೆಯ ಸಂದರ್ಭದಲ್ಲಿ, ಫಿರೋಜ್‌ಪುರ, ಅಮೃತಸರ, ರೂಪನಗರ್, ಗುರುದಾಸ್‌ಪುರ ಜಿಲ್ಲೆಗಳು ಸೇರಿದಂತೆ ಪಂಜಾಬ್‌ನ ಹಲವಾರು ಸ್ಥಳಗಳಲ್ಲಿ ನೂರಾರು ರೈತರು ರೈಲು ಹಳಿಗಳ ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಭಾರತಿ ಕಿಸಾನ್ ಯೂನಿಯನ್, ಭಾರತಿ ಕಿಸಾನ್ ಯೂನಿಯನ್ ಮತ್ತು ಕ್ರಾಂತಿಕಾರಿ ಕಿಸಾನ್ ಯೂನಿಯನ್ – ರೈತ ಸಂಘಟನೆಗಳು ಕೂಡ ‘ರೈಲ್ ರೋಕೋ’ ಆಂದೋಲನದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿಗಳಲ್ಲಿ ಭಾಗಿ ಭದ್ರತೆ:
‘ರೈಲ್ ರೋಕೋ’ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಲ್ಲಾ ಗಡಿಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಭಾರಿ ಅನಾಹುತ ತಪ್ಪಿಸಲು ಸೆಕ್ಷನ್ ೧೪೪ ವಿಧಿಸಿದ್ದಾರೆ. ರಾಜ್ಯದಲ್ಲಿ ಉದ್ವಿಗ್ನ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಇಂಟರ್ ಸಿಟಿ ಮತ್ತು ರಾಜ್ಯ ರೈಲು ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಳೆದ ತಿಂಗಳು, ರೈತರು ಹಳಿಗಳ ಮೇಲೆ ಧರಣಿ ಸತ್ಯಾಗ್ರಹ ನಡೆಸಿದ್ದರಿಂದ ದೆಹಲಿ-ಅಮೃತಸರ ಮಾರ್ಗದಲ್ಲಿ ಹಲವಾರು ರೈಲುಗಳು ತಡವಾಗಿ ಸಂಚಾರ ಆರಂಭವಾಗಿದ್ದು ಅಡಚಣೆ ಎದುರಾಗಿದೆ.

ಪ್ರತಿಭಟನೆ ತೀವ್ರ
‘ರೈಲ್ ರೋಕೋ’ ಪ್ರತಿಭಟನೆಗೆ ಕರೆ ನೀಡಿರುವ ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಬೇಡಿಕೆಗಳನ್ನು ಕೇಂದ್ರ ಈಡೇರಿಸುವವರೆಗೆ ರೈತರು ಅಸ್ತಿತ್ವದಲ್ಲಿರುವ ಪ್ರತಿಭಟನಾ ಸ್ಥಳಗಳಲ್ಲಿ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ರೈತರ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿಗೆ ಕಾನೂನು ಖಾತರಿ ನೀಡುವ “ತನ್ನ ಜವಾಬ್ದಾರಿಯಿಂದ ಓಡಿಹೋಗಬೇಡಿ” ಎಂದು ಕೇಂದ್ರವನ್ನು ಒತ್ತಾಯಿಸಿದ್ಧಾರೆ. ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲದು ಎಂದಿದ್ದಾರೆ.