ರೈತರಿಂದ ನೀರಿಗಾಗಿ ಹೋರಾಟ

ವಿಜಯಪುರ :ಮೇ.5: ಮೊದಲಿನಿಂದಲು ಬೆಸಿಗೆ ವೇಳೆ ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ಉರಿ ಬಿಸಿಲಿನಲ್ಲಿ ಕುಳಿತು ಅನೇಕ ಬಾರಿ ಹೋರಾಟ ಮಾಡಿ, ಹಲವಾರು ಬಾರಿ ಮನವಿ ಸಲ್ಲಿಸಿದರು ಗೋಳಾಟ ತಪ್ಪಿಲ್ಲ, ವಿಜಯಪುರ ಜಿಲ್ಲೆಯ ಕಾಲುವೆಗಳಿಗೆ ನೀರು ಹರಿಸದೆ ನಾರಾಯಣಪುರ ಕಾಲುವೆಗೆ ನೀರು ಹರಿಸುತ್ತಿರುವುದು ಖಂಡನೀಯ, ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಕೋಲಾರ ತಾಲುಕಿನ ಅಧ್ಯಕ್ಷರಾದ ಸೋಮು ಬಿರಾದಾರ ರೈತರೊಡನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯ ಅನೇಕ ರೈತರು ತಮ್ಮ ಬೆಲೆಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಆಲಮಟ್ಟಿ ಜಲಾಶಯಕ್ಕೆ ಹಾಗೂ ಎನ್.ಟಿ.ಪಿ.ಸಿ ಸೇರಿದಂತೆ ಕೆ.ಐ.ಡಿ.ಬಿ ಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡು ಜಿಲ್ಲೆಗೆ ನೀರಾವರಿ ಆಗುವ ಭರವಸೆಯನ್ನು ಹೊಂದಿದ ರೈತರಿಗೆ ಸರಿಯಾದ ಸಮಯಕ್ಕೆ ನೀರು ಸಿಗದೇ ಕಂಗಾಲಾಗಿರುವ ರೈತ ಇದ್ದ ಅಲ್ಪ ಸ್ವಲ್ಪ ಬೆಳೆ ಹಾಗೂ ಜಾನುವಾರುಗಳಿಗೆ ನೀರು ಸಿಗದೇ ಪರಿತಪ್ಪಿಸುವಂತಾಗಿದೆ, ಈ ಕೂಡಲೇ ಜಿಲ್ಲೆಯ ಮುಳವಾಡ ಏತ ನೀರಾವರಿಯ ಎಡ ಹಾಗೂ ಬಲ ಭಾಗದ ಕಾಲುವೆಗಳಿಗೆ ಬೀರು ಹರಿಸಿದರೆ 165 ಕೆರೆ ತುಂಬುವುದಲ್ಲದೇ ಹಳ್ಳ ಕೊಳ್ಳಗಳು ಹರಿದು ಅಂತರ್ಜಲ ಹೆಚ್ಚಾಗುವುದು, ಆದ್ದರಿಂದ ಧನಕರು, ಕುರಿಗಳಿಗೆ ನೀರು ಕೊಟ್ಟಂತಾಗುತ್ತದೆ ಎಂದರು.
ಇದೇ ವೇಳೆ ಉರಿ ಬಿಸಿಲಿನಲ್ಲಿ ಸುಮಾರು 3-4 ಘಂಟೆಗಳ ಕಾಲ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ನೂರಾರು ರೈತರು ಧರಣಿ ಕುಳಿತ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ ದಾನಮ್ಮನವರ ಅವರು ಆಗಮಿಸಿ ಮನವಿ ಸ್ವೀಕರಿಸುವ ವೇಳೆಯಲ್ಲಿ ರೈತರು ಗೋಳಾಡಿ ಜಿಲ್ಲಾಧಿಕಾರಿಗಳ ಕಾಲಿನ ಮೇಲೆ ಬಿದ್ದು ತಮ್ಮ ಅಳಲನ್ನು ತೊಡಿಕೊಂಡು ತಕ್ಷಣ ನೀರು ಬಿಡಿ ಇಲ್ಲದಿದ್ದರೆ ನಮ್ಮ ಜಾನುವಾರುಗಳು ಸಾಯುತ್ತವೆ ಎಂದು ಗೋಳೋ ಎಂದು ಬೇಡಿಕೊಂಡ ಘಟನೆ ನಡೆಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಬೆಳಗಾವಿಯ (ಆರ್,ಸಿ) ಆಯುಕ್ತರೊಡನೆ ಸಂಪರ್ಕ ಮಾಡಿ ಆದಷ್ಟು ಬೇಗನೆ ನೀರು ಬಿಡುವುದಾಗಿ ಭರವಸೆ ನೀಡಿದ ನಂತರ ರೈತರು ತಮ್ಮ ಹೋರಾಟವನ್ನು ಹಿಂತಗೆದುಕೊಂಡರು.
ಈ ವೇಳೆ ರೈತ ಮುಖಂಡರಾದ ಬಸ್ಸು ನ್ಯಾಮಗೊಂಡ, ಮುತ್ತು ಸಾವಕಾರ, ಸತ್ಯಪ್ಪ ಕುಳ್ಳೊಳ್ಳಿ, ರವಿಕಾಂತ ಪಾಟೀಲ, ಈರಣ್ಣ ಬಿರಾದಾರ, ಬಸ್ಸು ವಾಲಿಕಾರ, ಮುದಕಣ್ಣ ಚಲವಾದಿ, ಪರಶು ಮಾದರ, ಶ್ರಿಶೈಲಗೌಡ ಪಾಟೀಲ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.