ರೈತರಿಂದ ಖರೀದಿಸುವ ಹಾಲಿನ ದರ ಕಡಿತ : ಶಿವಮೊಗ್ಗದಲ್ಲಿ ಡಿಸಿ ಕಚೇರಿ ಎದುರು ಗೋವುಗಳೊಂದಿಗೆ ಬಿಜೆಪಿ ಪ್ರತಿಭಟನೆ

 ಸಂಜೆವಾಣಿ ವಾರ್ತೆ

ಶಿವಮೊಗ್ಗ, ಫೆ. ೭: ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಪಕ್ಷದ ರೈತ ಮೋರ್ಚಾ ಸಂಘಟನೆಯು ಮಂಗಳವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಎದುರು ಆಕಳುಗಳೊಂದಿಗೆ ಪ್ರತಿಭಟನೆ ನಡೆಸಿತು.ಈ ಹಿಂದೆ ರೈತರಿಂದ ಖರೀದಿಸಲಾಗುತ್ತಿದ್ದ ಹಾಲಿನ ದರವು 40+2 ರೂ.ಗಳಿತ್ತು. ಪ್ರಸ್ತುತ ಈ ದರವು 33 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಹಾಗೆಯೇ ಹಾಲು ಉತ್ಪಾದಕರಿಗೆ ನಂದಿನಿ ಸಂಸ್ಥೆಯಿಂದ ನೀಡಲಾಗುತ್ತಿದ್ದ ಪಶು ಆಹಾರದ ದರವು 950 ರೂ.ಗಳಿದ್ದು ಇದನ್ನು 1250 ರೂ.ಗೆ ಏರಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.ಭತ್ತ, ಮಕ್ಕೆಜೋಳ, ಕಬ್ಬು ಮತ್ತೀತರ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ರೈತರಿಗೆ ನೆರವು ದೊರಕುತ್ತಿಲ್ಲವಾಗಿದೆ. ಕಬ್ಬು ಬೆಳೆಗೂ ಬೆಂಬಲ ಬೆಲೆ ನೀಡಿಲ್ಲ. ಹಾಗೆಯೇ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರವು ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿ, ಪ್ರಸ್ತುತ ಕೇವಲ 4 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿದೆ. ಲೋಡ್ ಶೆಡ್ಡಿಂಗ್ ನಿಂದ ರೈತರು ಬೆಳೆದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಸಂಪೂರ್ಣ ಬೆಳೆ ಹಾಳಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ಧಾರೆ.ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ರೈತ ಮೋರ್ಚಾದಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಚನ್ನಬಸಪ್ಪ, ಪ್ರಮುಖರಾದ ಮೇಘರಾಜ್, ದತ್ತಾತ್ರಿ, ಸಿದ್ದಲಿಂಗಪ್ಪ ಸೇರಿದಂತೆ ಮೊದಲಾದವರಿದ್ದರು.