ರೈತರಿಂದ ಅಧಿಕ ಹಣ ವಸೂಲಿ;ಆರೋಪ


ಹೊನ್ನಾಳಿ.ನ.೧೯; ಭತ್ತದ ಕಟಾವು ಕಾರ್ಯ ಜಿಲ್ಲಾದ್ಯಂತ ಪ್ರಾರಂಭವಾಗಿದ್ದು, ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಅಧಿಕ ಹಣ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವ ದರದಲ್ಲಿ ಎಲ್ಲಿಯೂ ಭತ್ತದ ಕಟಾವು ಕಾರ್ಯ ಆಗುತ್ತಿಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತ ಪ್ರತಿ ಎಕರೆ ಭತ್ತ ಕಟಾವಿಗೆ ೧,೫೦೦ ರೂ.ಗಳನ್ನು ಮಾತ್ರ ರೈತರಿಂದ ಪಡೆದುಕೊಳ್ಳಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಆದರೆ, ವಾಸ್ತವವಾಗಿ ರೈತರಿಂದ ೨,೫೦೦ ರೂ.ಗಳಷ್ಟು ಹಣ ಪಡೆಯಲಾಗುತ್ತಿದೆ. ಟೈರ್ ಯಂತ್ರಗಳಾದರೆ ಪ್ರತಿ ಎಕರೆಗೆ ೨,೦೦೦-೨,೨೦೦ ರೂ. ಹಾಗೂ ಚೈನ್ ಯಂತ್ರಗಳಾದರೆ ಪ್ರತಿ ಎಕರೆಗೆ ೨,೨೦೦-೨,೫೦೦ ರೂ.ಗಳವರೆಗೂ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ. ಇದೇ ರೀತಿ ಮೆಕ್ಕೆಜೋಳ ಒಡೆಯುವ ಯಂತ್ರಕ್ಕೂ ಹೆಚ್ಚಿನ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಕ್ವಿಂಟಾಲ್ ಮೆಕ್ಕೆಜೋಳ ಒಡೆಯಲು ಜಿಲ್ಲಾಡಳಿತ ೧,೦೦೦-೧,೨೦೦ ರೂ. ನಿಗದಿಪಡಿಸಿದೆ. ಆದರೆ, ರೈತರಿಂದ ೧,೫೦೦-೧,೮೦೦ ರೂ.ಗಳಷ್ಟು ಹಣ ಪಡೆದುಕೊಳ್ಳಲಾಗುತ್ತಿದೆ. ಅಷ್ಟು ಅಧಿಕ ಹಣ ನೀಡಲಾಗದೇ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.
ಮೆಕ್ಕೆಜೋಳದ ಬೆಲೆ ತೀವ್ರವಾಗಿ ಕುಸಿದಿದೆ. ಸರಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಭತ್ತದ ಬೆಲೆ ಕೂಡ ಅತಿ ಕಡಿಮೆ ಇದೆ. ಕ್ವಿಂಟಾಲ್‌ಗೆ ೧,೩೦೦-೧,೮೦೦ ರೂ.ಗಳಷ್ಟು ಇದೆ. ಇದರಿಂದ ರೈತರಿಗೆ ತೀವ್ರ ನಷ್ಟವಾಗುತ್ತಿದೆ. ಅಧಿಕ ಬೆಲೆಯ ಬಿತ್ತನೆ ಬೀಜ, ಗೊಬ್ಬರ, ಕಳೆ-ಕೀಟನಾಶಕ ಹಾಕಿ ಬೆಳೆ ತೆಗೆದ ರೈತನಿಗೆ ಕಡಿಮೆ ಬೆಲೆ ದೊರೆಯುತ್ತಿದ್ದು, ಖರ್ಚು ಮಾಡಿದಷ್ಟು ಹಣವೂ ವಾಪಸ್ ಬಾರದಂತಾಗಿದೆ. ಹಾಗಾಗಿ, ಸರಕಾರ ಶೀಘ್ರವೇ ಇತ್ತ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು. ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.