ರೈತರಿಂದಲೇ ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರದ ಅನುಮತಿಗೆ ಒತ್ತಾಯ

ಕಲಬುರಗಿ:ಡಿ.08: ಕರ್ನಾಟಕ ರಾಜ್ಯದಲ್ಲಿನ ವಿದ್ಯುತ್ ಕ್ಷಾಮವನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರವು ರೈತರಿಗೆ ತಮ್ಮ, ತಮ್ಮ ಹೊಲಗಳ ಬದುಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿನ್ ಪಾಷಾ ಸಿಂದಗಿ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಲಾಗಿತ್ತು. ಅಲ್ಲದೇ ಈಗಲೂ ಸಹ ಅವರಿಗೆ ಮತ್ತೆ ಕೋರಿಕೆ ಸಲ್ಲಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಸಹ ಮನವಿ ಮಾಡಲಾಗಿತ್ತು. ಆದಾಗ್ಯೂ, ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬದುಗಳಲ್ಲಿ ರೈತರು ಸೌರ ವಿದ್ಯುಚ್ಛಕ್ತಿಯನ್ನು ಹಾಗೂ ಪವನ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದಾಗಿದೆ. ಈ ಸಂಬಂಧ ನಾವು ಎಲ್ಲ ರೀತಿಯ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿ ತಲಾ ಅರ್ಧ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಕೊಡಲು ಸಿದ್ಧನಿದ್ದಾನೆ. ಆದಾಗ್ಯೂ, ರೈತರಿಗೆ ವಿದ್ಯುತ್ ಉತ್ಪಾದನೆಗೆ ಕೊಡದೇ ರಾಜ್ಯ ಸರ್ಕಾರಗಳು ಕೇವಲ ಕಂಪೆನಿಗಳಿಗೆ ಮಾತ್ರ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡುತ್ತಿವೆ. ಹೀಗಾಗಿ ಯಾವುದೇ ರೀತಿಯಲ್ಲಿ ಉಪಯೋಗ ಆಗುತ್ತಿಲ್ಲ ಎಂದು ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಒಂದು ವೇಳೆ ರೈತರಿಗೆ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಉದ್ಭವಿಸುವುದಿಲ್ಲ. ನಾವು ಕೊಟ್ಟ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಮಳೆ ಬಾರದೇ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಇಲ್ಲದೇ ಬೆಂಗಳೂರು, ಪುಣೆ ಮುಂತಾದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅದರಲ್ಲಿಯೂ ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಕೃಷಿ ಕೂಲಿಕಾರರು ಗುಳೆ ಹೋಗುತ್ತಿದ್ದಾರೆ. ಅದನ್ನು ತಡೆಯಲು ಕೂಡಲೇ ಉದ್ಯೋಗ ಖಾತ್ರಿ ಯೋಜನೆಯಡಿ 150 ದಿನಗಳ ಉದ್ಯೋಗಗಳನ್ನು ಕೊಡಬೇಕು ಎಂದು ಅವರು ಆಗ್ರಹಿಸಿದರು.
ಬರ ಪರಿಹಾರ ಕೊಡುವುದಾಗಿ ಸರ್ಕಾರವು ಹೇಳುತ್ತಿದೆಯೇ ಹೊರತು ಬಿಡುಗಡೆ ಮಾಡಿಲ್ಲ. ಎಫ್‍ಡಿಐ ಮಾಡಿಸಬೇಕು ಎಂದು ಸರ್ಕಾರ ಹೇಳುತ್ತಿದೆ. ರೈತರು ಎಫ್‍ಡಿಐ ಮಾಡಿಸಿದರೂ ಸಹ ಅವರ ಖಾತೆಗೆ ಬರ ಪರಿಹಾರದ ಹಣ ಬಂದಿಲ್ಲ. 8 ದಿನಗಳೊಳಗೆ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ಕೃಷಿ ಮಾರುಕಟ್ಟೆಯಲ್ಲಿ ಹತ್ತಿ ಬೆಂಬಲ ಬೆಲೆ ಕುಸಿದಿದೆ. ಕಳೆದ 2021-2022ರಲ್ಲಿ ಕನಿಷ್ಠ ಹತ್ತಿ ದರ 11000ರೂ>ಗಳಿಂದ 13000ರೂ.ಗಳವರೆಗೆ ಇತ್ತು. ಈ ಬಾರಿ 6000ರೂ.ಗಳಿಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಹತ್ತಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಯಬಣ್ಣ ಪೂಜಾರಿ, ಸೋಮನಗೌಡ ಬಳಬಟ್ಟಿ, ಭೀಮನಗೌಡ ಕಟ್ಟಿಮನಿ, ಸಂತೋಷ್ ರಾಠೋಡ್, ವೀರೇಶ್ ಕವಲ್ಲಿಧರ್, ಸಿದ್ದಣ್ಣ ಸಿಲೇಧರ್, ನಾಗರಾಜ್ ರಕ್ಕಮಗೇರ್, ಮಹಬೂಬ್, ಮಡಿವಾಳಪ್ಪಗೌಡ, ನಿಂಗಪ್ಪ ರಾಯಚೂರು, ಶಾಂತಾಬಾಯಿ ರಾಠೋಡ್, ಅಲ್ಲಾಪಟೇಲ್ ಶಿವಪೂರ್ ಮುಂತಾದವರು ಉಪಸ್ಥಿತರಿದ್ದರು.