ರೈತರನ್ನು ಸಾಲದ ಸುಳಿಗೆ ಸಿಲುಕಿಸುವ ಕಾಯ್ದೆ ರೂಪಿಸುತ್ತಿರುವ ಸರ್ಕಾರ; ಆರೋಪ

ದಾವಣಗೆರೆ. ನ.8; ರಾಜ್ಯ ಸರ್ಕಾರವು ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸಫಾರ್ಮರ್ ಸಹಿತ ಉಚಿತ ಮೂಲಸೌಕರ್ಯ ನೀಡುವ ಯೋಜನೆ ಮುಂದುವರೆಸಬೇಕು ಹಾಗೂ ಕೇಂದ್ರ ಸರ್ಕಾರವು ಸೋಲಾರ್ ಪಂಪ್‌ಸೆಟ್‌ಗಳಿಗೆ ನೀಡುವ ಸಬ್ಸಿಡಿಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ ಜಿಲ್ಲಾ ಆಮ್ ಆದಿ ಪಕ್ಷ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಎಎಪಿಯ ಜಿಲ್ಲಾಧ್ಯಕ್ಷ ಕೆ.ಎಸ್ ಶಿವಕುಮಾರಪ್ಪ ಮಾತನಾಡಿರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹಿತಾಸಕ್ತಿಯನ್ನು ಕಾಪಾಡುವ ಕಾನೂನನ್ನು ಜಾರಿಗೆ ತರದೇ ರೈತರನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸುವ ಕಾಯ್ದೆಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು. ಸರ್ಕಾರವು ಹಿಂದೆ ಅಕ್ರಮ-ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆಯಡಿಯಲ್ಲಿ ರೈತರಿಂದ ಆರಂಭಿಕ ಭದ್ರತಾ ಠೇವಣಿ ಹಾಗೂ ಮೂಲಸೌಕರ್ಯದ ಅಭಿವೃದ್ಧಿ ವೆಚ್ಚಕ್ಕಾಗಿ ಪ್ರತಿ ಕೊಳವೆ ಬಾವಿಗೆ.24,000 ರೂಗಳನ್ನು ಮಾತ್ರ ಕಟ್ಟಿಸಿಕೊಳ್ಳುತ್ತಿದ್ದು, ಈ ಶುಲ್ಕವು ರೈತರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗಿರಲಿಲ್ಲ ಹಾಗೂ ಇದರ ಅಡಿಯಲ್ಲಿ ವಿದ್ಯುತ್ ವಿತರಣಾ ಕಂಪನಿಗಳಿಂದ’ ಟ್ರಾನ್ಸ್‌ಫಾರ್ಮರ್ ಹಾಗೂ 500 ಮೀಟರ್‌ ವರೆಗೆ ಉಚಿತವಾಗಿ ವಿದ್ಯುತ್ ಕಂಬಗಳನ್ನು ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರವು ಇತ್ತೀಚೆಗೆ ಒಂದು ಸುತ್ತೋಲೆಯನ್ನು ಹೊರಡಿಸಿದ್ದು, ಸೆಪ್ಟೆಂಬರ್ 22 ರ ನಂತರ ರೈತರು ತಮ್ಮ ಸ್ವಂತ ಹಣದಲ್ಲಿ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬಗಳನ್ನು ಪಡೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ಸುಮಾರು 2,50 ಲಕ್ಷ ರೂ.ಗಳು ಖರ್ಚಾಗುವುದು ಹಾಗೂ ರೈತರು ಇದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದರು.ಗ್ರೀನ್ ಎನರ್ಜಿ ಯೋಜನೆಯಡಿಯಲ್ಲಿ ಉಚಿತವಾಗಿ ಸೋಲಾರ್ ಪಂಪ್ ಸೆಟ್ ಗಳಿಗೆ ನೀಡುವ ಸಬ್ಸಿಡಿಯಲ್ಲಿ ಕೇಂದ್ರದ ಪಾಲು ಶೇ೩೦ ರಷ್ಟಿದೆ ಮತ್ತು ರಾಜ್ಯದ ಪಾಲು ಶೇ ೫೦ ಎಂದು ಘೋಷಣೆ ಮಾಡಿದೆ.ಜಿಎಸ್ ಟಿಯಲ್ಲಿ ಸಮಪಾಲು ಪಡೆಯುವ ಕೇಂದ್ರ ಸರ್ಕಾರ ಸೋಲಾರ್ ಪಂಪ್ ಸೆಟ್ ಗಳಿಗೂ ಶೇ ೫೦ ರಷ್ಟು ತನ್ನ ಪಾಲು ಭರಿಸಬೇಕು ಎಂದರು.ರೈತ ದೇಶದ ಬೆನ್ನೆಲುಬು ಎಂದು ಹೇಳಿ ತಮ್ಮ ಕಾನೂನುಗಳ ಮೂಲಕ ರೈತರನ್ನು ಸುಲಿಗೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ದೂಡಿ ಹಿಂಬದಿಯಿಂದ  ಆತ್ಮಹತ್ಯೆ ಮಾಡಿಕೊಳ್ಳುವ ಪ್ರಚೋದನೆ ಮಾಡುತ್ತಿರುವುದು  ಕಂಡು ಬರುತ್ತಿದೆ. ಒಂದು ಕಡೆ ರೈತರು ಬ್ಯಾಂಕುಗಳಲ್ಲಿ ಮಾಡಿದ ಸಾಲದ ಬಾಧೆ ತಾಳಲಾರದೇ ಪರಿತಪಿಸುತ್ತಿದ್ದರೆ ಮತ್ತೊಂದು ಕಡೆ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಈ ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿ ನಿಲ್ಲಬೇಕು ಹಾಗೆಯೇ ರಾಜ್ಯ ಸರ್ಕಾರವು ತನ್ನ ಆದೇಶ ಹಿಂಪಡೆದು ಅತೀ ಕಡಿಮೆ ದರದಲ್ಲಿ ರೈತರ ನೀರಾವರಿಗೆ ಉಚಿತ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ಆರ್.ಅರುಣಕುಮಾರ್,ಎಸ್.ಕೆ ಆದಿಲ್ ಖಾನ್,ರವೀಂದ್ರ, ಸುರೇಶ್ ಸಿಡ್ಲಪ್ಪ,ಪ್ರೊ.ಧರ್ಮಾನಾಯ್ಕ್ ಉಪಸ್ಥಿತರಿದ್ದರು.