‘ರೈತರನ್ನು ಸತಾಯಿಸಬೇಡಿ’ ಅಧಿಕಾರಿಗಳಿಗೆ ಶಾಸಕರ ಎಚ್ಚರಿಕೆ

smart

ಪುತ್ತೂರು, ಜ.೧೩- ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. ಆದರೆ ಈ ಸೌಲಭ್ಯ ಪಡೆಯಲು ರೈತರು ಹತ್ತಾರು ಬಾರಿ ಇಲಾಖೆಗಳಿಗೆ ಅಲೆದಾಡುವಂತಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸಕ್ಕಾಗಿ ಬರುವ ರೈತರನ್ನು ಸತಾಯಿಸದೆ ಅವರಿಗೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 ಪುತ್ತೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಸರ್ಕಾರದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳನ್ನು ನೀಡದೆ ಸತಾಯಿಸುವ ಅಧಿಕಾರಿಗಳ ಬಗ್ಗೆ ದೂರು ವ್ಯಕ್ತವಾಗುತ್ತಿದೆ. ಎಸಿ ಕೊಠಡಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವ ಬದಲು ಅಧಿಕಾರಿಗಳು ರೈತರ ಅಂಗಳಕ್ಕಿಳಿದು ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಬೇಕು. ನಿಮ್ಮ ಬೇಜವಾಬ್ದಾರಿತನದಿಂದ ಜನತೆ ಸರ್ಕಾರವನ್ನು ದೂರುವಂತಾಗಿದೆ. ಇನ್ನು ಮುಂದೆ ಇಂತಹ ಆರೋಪಗಳು ಬರದಂತೆ ಕಾರ್ಯನಿರ್ವಹಿಸಿ ಎಂದು ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ರೈತರ ಪರವಾಗಿ ಅಧಿಕಾರಿಗಳು ನಿಂತು ಅವರಿಗೆ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಅವರ ಕೆಲಸಗಳನ್ನು ಆದ್ಯತೆ ನೆಲೆಯಲ್ಲಿ ಮಾಡಿಕೊಡಬೇಕು. ಕಚೇರಿಯಿಂದ ಕಚೇರಿಗೆ ಅವರನ್ನು ಅಲೆದಾಡಿಸುವ ಕೆಲಸ ನಡೆಯಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೂ.೨೧.೪೦ ಕೋಟಿ ಸಾಲಮನ್ನಾ ಬಾಕಿ

ಪುತ್ತೂರು ತಾಲೂಕಿನಲ್ಲಿ ಒಟ್ಟು ೧೨,೩೧೩ ರೈತರ ರೂ. ೯೦.೭೮ ಕೋಟಿ ಮೊತ್ತ ಸಾಲವನ್ನು ಮನ್ನಾ ಮಾಡಲಾಗಿದೆ. ಇನ್ನೂ ೨,೩೫೨ ರೈತರ ರೂ. ೨೧.೪೦ ಕೋಟಿ ಮೊತ್ತ ಸಾಲ ಮನ್ನಾಕ್ಕೆ ಬಾಕಿ ಉಳಿದಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಸಾಲ ಮನ್ನಾ ಮಾಡಲು ಬಾಕಿ ಉಳಿದಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದರು. ಇದಕ್ಕಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ರೈತರ ಬಾಕಿ ಸಾಲ ಮನ್ನಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ಇಲಾಖೆ ಶಾಸಕರು ಗರಂ

ಹಿಂದುಳಿದವರ ಅಭಿವೃದ್ಧಿ ನಿಗಮ ಮತ್ತು ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇಲಾಖೆ ಶೂನ್ಯ ಪ್ರಗತಿಯನ್ನು ದಾಖಲಿಸಿದೆ. ಅಧಿಕಾರಿಗಳು ಈ ಕುರಿತು ಯಾವುದೇ ಮುತುವರ್ಜಿ ವಹಿಸುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಇಲಾಖೆಯಲ್ಲಿ ರಾಜ್ಯ ಮಟ್ಟದಿಂದಲೇ ಟೆಂಡರ್ ನಡೆಯಬೇಕಾಗುತ್ತದೆ. ಅಲ್ಲಿಂದ ನಮಗೆ ಸೂಕ್ತ ಸ್ಪಂದನೆ ದೊರಕದ ಕಾರಣ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಉತ್ತರಿಸಿದರು.

ಇದಕ್ಕೆ ಗರಂ ಆದ ಶಾಸಕರು, ನೀವು ಪ್ರತಿಯೊಂದು ಸಭೆಯಲ್ಲೂ ಇದೇ ಮಾತನ್ನು ಹೇಳುತ್ತೀರಿ. ನಿಮ್ಮ ಹೊಣೆಗಾರಿಕೆಯನ್ನು ಮೇಲಾಧಿಕಾರಿಗಳ ಹೆಗಲ ಮೇಲೆ ಹಾಕುತ್ತೀರಿ. ಹಾಗಿದ್ದರೆ ನಿಮ್ಮ ಹೊಣೆಗಾರಿಕೆ ಏನು? ನೀವು ಇಲ್ಲಿರುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ನೀವು ಇಲ್ಲಿ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದೀರಿ. ಆದುದರಿಂದ ಮುಂದಿನ ಸಭೆಯೊಳಗಾಗಿ ನಿಮ್ಮ ಇಲಾಖೆಯಿಂದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ಆದೇಶಿಸಿದರು.

ಪುತ್ತೂರು ತಾಪಂ ಅಧ್ಯಕ್ಷ ರಾಧಾಕೃಷ್ನ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.

ಉದ್ದಿಮೆಗಳ ಸ್ಥಾಪನೆಗೆ ಆಸಕ್ತಿ

ಬೆಂಗಳೂರಿನ ವಿವಿಧ ಕಂಪೆನಿಗಳು ಪುತ್ತೂರು ವ್ಯಾಪ್ತಿಯಲ್ಲಿ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಲು ಆಸಕ್ತವಾಗಿವೆ. ಈ ನಿಟ್ಟಿನಲ್ಲಿ ಇಂತಹ ಕಂಪೆನಿಗಳಿಗೆ ವಿವಿಧ ಇಲಾಖೆಗಳು ಸೂಕ್ತ ಸಹಕಾರ, ಮಾರ್ಗದರ್ಶನ ನೀಡಬೇಕಾಗಿದೆ. ಉದ್ದಿಮೆಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಅಗತ್ಯವಿರುವ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಗೋಮಾಳ ಭೂಮಿಯಾದರೂ ಉತ್ತಮವೇ ಎಂದು ಸಂಜೀವ ಮಠಂದೂರು ತಿಳಿಸಿದರು.

‘ಹಣ’ ಮಾಡುವ ಅಧಿಕಾರಿ..!

ತಾಲೂಕಿನ ಅಲ್ಪಸಂಖ್ಯಾತ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಹಣ ಮಾಡುವುದೇ ಕೆಲಸ. ಒಬ್ಬರು ಜಿಲ್ಲಾ ಅಧಿಕಾರಿ ಬಂದು ಹಣ ಮಾಡಿಕೊಂಡು ಹೋಗುತ್ತಾರೆ. ಬಳಿಕ ಬರುವ ಇನ್ನೊಬ್ಬ ಅಧಿಕಾರಿಯೂ ಇದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಆಕ್ರೋಶ ವ್ಯಕ್ತಪಡಿಸಿದರು.