ರೈತಪರ ಸರ್ಕಾರ ರಚನೆಗೆ ಕೈಜೋಡಿಸಿ: ಗೋಪಾಲಕೃಷ್ಣ

ಕೋಲಾರ,ಮೇ,೬:ಸುಶೀಕ್ಷಿತ,ಸಭ್ಯ ವ್ಯಕ್ತಿತ್ವದ ಬಂಗಾರಪೇಟೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ಅವರಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ರೈತಪರ ಸರ್ಕಾರ ರಚನೆಗೆ ನೆರವಾಗಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಿರ್‍ನಹಳ್ಳಿ, ಅಜ್ಜಪ್ಪನಹಳ್ಳಿ,ನೆನುಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.ಹಣಕೊಟ್ಟು ಮತಗಳನ್ನು ಖರೀದಿ ಮಾಡಲು ಬಂದಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಮಲ್ಲೇಶ ಬಾಬು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಹಣವೇ ಮಾನದಂಡದಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಶಾಸಕರಾಗಿ ಕೆಲಸ ಮಾಡಿರುವ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಕೇವಲ ದುಡ್ಡುಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಕ್ಷೇತ್ರದ ಜನತೆ ಸ್ವಾಭಿಮಾನದ ಮೂಲಕ ಉತ್ತರ ಕೊಡಬೇಕು ಹಣ ಕೊಟ್ಟ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನಕ್ಕೆ ತಿಲಾಂಜಲಿ ಇಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಹಿರಿಯ ಮುಖಂಡ ಮೂರಾಂಡಹಳ್ಳಿ ಡಾ.ಗೋಪಾಲಪ್ಪ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತವನ್ನು ರಾಜ್ಯದ ಜನತೆ ನೋಡಿ ಬೇಸತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಗಾಗಿ ಜೆಡಿಎಸ್ ಮತ ನೀಡಲು ಈಗಾಗಲೇ ಮನಸ್ಸು ಮಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಜನಪರ ಆಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಪಕ್ಷಕ್ಕ ಮತ ಹಾಕಿಸುವಂತೆ ಮನವಿ ಮಾಡಿದರು.
ವಡಗೂರು ರಾಮು, ಚದುಮನಹಳ್ಳಿ ಲಕ್ಷ್ಮಣ್, ಕುರುಬರ ಸಂಘದ ಅಜ್ಜಪ್ಪನಳ್ಳಿ ಸೋಮಶೇಖರ್, ಮುಖಂಡರಾದ ಅಶೋಕ್,ಗೋವಿಂದಪ್ಪ ಮತ್ತಿತರರಿದ್ದರು.