ರೈತಪರ ಯೋಜನೆಗಳ ರದ್ದತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ತುಮಕೂರು, ಆ. ೮- ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ಜನಪರ, ರೈತಪರ ಯೋಜನೆಗಳನ್ನು ರದ್ದು ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಬೆನ್ನು ಮೂಳೆ ಮುರಿಯಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಜಾರಿಯಲ್ಲಿದ್ದ ಕೃಷಿ ಸನ್ಮಾನ್, ವಿದ್ಯಾಸಿರಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಪಕ್ಷದ ಜನಪರ, ಜೀವಪರ ಯೋಜನೆಗಳನ್ನು ರದ್ದು ಮಾಡಿ, ಗ್ಯಾರೆಂಟಿಗಳ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ಹೊರಟಿದೆ ಎಂದರು.
ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಸಾಧಕ, ಭಾದಕಗಳ ಬಗ್ಗೆ ತಿಳುವಳಿಕೆ ಇಲ್ಲದೆ, ಅತ್ಯಂತ ಚೀಪ್ ಪಾಪ್ಯುಲಾರಿಟಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ,ಆ ಯೋಜನೆಗಳಿಗೆ ಹಣ ಹೊಂದಿಸಲು ಈ ಹಿಂದಿನ ಸರಕಾರದ ಜನಪರ ಯೋಜನೆಗಳನ್ನು ಕೈಬಿಟ್ಟಿದೆ.ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ ವಿದ್ಯಾಸಿರಿ ಯೋಜನೆಯಿಂದ ರಾಜ್ಯದ ಸುಮಾರು ೧೧ ಲಕ್ಷ ವಿದ್ಯಾರ್ಥಿಗಳಿಗೆ ೨ ಸಾವಿರದಿಂದ ೨೦ ಸಾವಿರದವರೆಗೆ ವಿದ್ಯಾರ್ಥಿವೇತನ ದೊರೆಯುತ್ತಿತ್ತು.ಕೇಂದ್ರದ ಕೃಷಿ ಸನ್ಮಾನ ಯೋಜನೆಯಿಂದ ರಾಜ್ಯ ೫೫ ಲಕ್ಷ ರೈತರಿಗೆ ವರ್ಷಕ್ಕೆ ೧೦ ಸಾವಿರ ರೂ ಸಹಾಯವಾಗುತ್ತಿತ್ತು.ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸಿತ್ತು.ಆದರೆ ಇದನ್ನು ರದ್ದು ಮಾಡಿ,ರೈತನಿಗೆ ಬಹಳ ನಷ್ಟ ಉಂಟು ಮಾಡಿದೆ. ಇದರ ವಿರುದ್ದ ರೈತರೇ ಶೀಘ್ರದಲ್ಲಿಯೇ ದಂಗೆ ಏಳಲಿದ್ದಾರೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ರಾಜ್ಯ ಸರ್ಕಾರದ ನಡೆ ಒಂದು ಕಡೆ ಹ್ಯಾಸ್ಯಾಸ್ಪದ ಎನಿಸಿದರೆ, ಮತ್ತೊಂದೆಡೆ ನಮ್ಮನ್ನು ಸಾಲದ ಸೂಲಕ್ಕೆ ಸಿಲುಕಿಸುತ್ತಾರೆನೋ ಎಂಬ ಭಯ ಕಾಡುತ್ತಿದೆ. ಕರ್ನಾಟಕ ಮತ್ತೊಂದು ಶ್ರೀಲಂಕಾ, ಪಾಕಿಸ್ಥಾನ ಆಗುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸರ್ಕಾರ ಅಭಿವೃದ್ದಿಯ ಕಡೆಗೆ ಚಿಂತನೆ ಮಾಡಿದರೆ, ರಾಜ್ಯ ಸರ್ಕಾರ ಗ್ಯಾರೆಂಟಿಗಳ ಮೂಲಕ ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದೆ. ಇವರ ಬಜೆಟ್‌ನ ಲೋಪದೋಷಗಳು ೨೦೨೪ರ ಬಜೆಟ್ ತಯಾರಿ ವೇಳೆ ಗೋಚರಿಸಲಿವೆ. ಪ್ರಧಾನಿ ಮೋದಿ ಅವರು ಆತ್ಮನಿರ್ಭರ್ ಭಾರತ್,ಮೇಕ್ ಇನ್ ಇಂಡಿಯಾ ದಂತಹ ಕಾರ್ಯಕ್ರಮಗಳ ಮೂಲಕ ಕೈಗಾರಿಕೆಗಳಿಗೆ ಹೂಡಿಕೆ ಮಾಡುತಿದ್ದರೆ, ಕಾಂಗ್ರೆಸ್ ಬಿಟ್ಟಿ ಯೋಜನೆಗಳ ಮೂಲಕ ದೇಶದ ಹಣಕಾಸು ಸ್ಥಿತಿಯನ್ನು ಹಾಳು ಮಾಡುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ೬೦ ಸಾವಿರ ಕೋಟಿ ರೂ.ಗಳನ್ನು ತನ್ನ ಗ್ಯಾರಂಟಿ ಯೋಜನೆಗೆ ಖರ್ಚು ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಉಚಿತ ಬಸ್ ಪ್ರಯಾಣದಿಂದಾಗಿ ಕೆಎಸ್ಸಾರ್ಟಿಸಿ ನಿಗಮ ಸಹ ಸಂಕಷ್ಟಕ್ಕೆ ತಲುಪುತ್ತಿದೆ. ಈ ಸರ್ಕಾರ ನವೆಂಬರ್ ವರೆಗೆ ಮಾತ್ರ ಅಸ್ತಿತ್ವದಲ್ಲಿರಲಿದೆ ಎಂದರು.
ಪ್ರತಿ ಹಾಲು, ಮೊಸರು ಪ್ಯಾಕೆಟ್ ಮೇಲೆ ೫೦ ಗ್ರಾಂ ಖಾತೋ ಆಗಿದೆ. ಆದರೆ ಬೆಲೆ ಮಾತ್ರ ಜಾಸ್ತಿಯಾಗುತ್ತಿದೆ. ಅಲ್ಲದೆ ರಾಜ್ಯದಿಂದ ತಿರುಪತಿ ತಿಮ್ಮಪ್ಪನ ಲಾಡಿಗೆ ಸರಬರಾಜಾಗುತ್ತಿದ್ದ ತುಪ್ಪವನ್ನು ಸಹ ನಿಲ್ಲಿಸಿ, ಅದನ್ನು ನಮ್ಮ ಸರ್ಕಾರದ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದ ಅವರು, ರೈತನಿಂದ ಕಿತ್ತುಕೊಂಡು ಅದೇ ರೈತನ ಪತ್ನಿಗೆ ೨ ಸಾವಿರ ರೂ. ಕೊಡುವಂತಹ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಬೊಕ್ಕಸಕ್ಕೆ ೨೬ ಸಾವಿರ ಕೋಟಿ ಅಬಕಾರಿಯಿಂದ ವರಮಾನ ಬರುತ್ತದೆ. ಆದರೆ ಮದ್ಯಕ್ಕಾಗಿ ಜನಸಾಮಾನ್ಯರು ೫ ಸಾವಿರ ರೂ.ಗಳನ್ನು ಖರ್ಚು ಮಾಡುತ್ತಾರೆ. ಅದರಲ್ಲಿ ೨ ಸಾವಿರ ರೂ.ಗಳನ್ನು ಮಹಿಳೆಯರಿಗೆ ಕೊಡುತ್ತಿದ್ದಾರೆ ಎಂದು ದೂರಿದರು.
ಉಚಿತ ಯೋಜನೆಗಳನ್ನು ಜಾರಿ ಮಾಡಿರುವ ತಮಿಳುನಾಡು ಸರ್ಕಾರವೂ ಕೂಡ ಸದ್ಯದಲ್ಲೇ ದಿವಾಳಿಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಹೊಸ ಸರ್ಕಾರ ಬಂದು ೭೫ ದಿನಗಳು ಪೂರೈಸಿವೆ. ಇಷ್ಟು ದಿನಗಳಲ್ಲಿಯೇ ಈ ರಾಜ್ಯದ ಜನರಿಗೆ ಕಾಂಗ್ರೆಸ್ ಮಾಡಿರುವ ಮೋಸ ಗೊತ್ತಾಗಿದೆ. ಶೇ. ೫೦ ರಷ್ಟಿರುವ ರೈತರಿಗಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವಾರು ಯೋಜನೆಗಳನ್ನು ಕೈಬಿಡುವ ಮೂಲಕ ರೈತ ದೇಶದ ಬೆನ್ನೆಲುಬು ಎನ್ನುವ ಘೋಷಣೆಗೆ ತಿಲಾಂಜಲಿ ಇಟ್ಟಿದೆ. ರೈತರು ಕೃಷಿ ಕಾಯಕದ ಸಂದರ್ಭದಲ್ಲಿ ಆಕಸ್ಮಿಕ ಸಾವಿಗೀಡಾದರೆ ಪರಿಹಾರ ಪಡೆಯಲು ಅಗತ್ಯವಿದ್ದ ಜೀವನಜೋತಿ ಭೀಮಾ ವಿಮಾ ಪಾಲಿಸಿಯನ್ನು ರಾಜ್ಯದ ಕಂತು ಕಟ್ಟುವುದನ್ನು ನಿಲ್ಲಿಸಿದೆ. ರೈತ ಆವರ್ತ ನಿಧಿ ರದ್ದು, ನೀರಾವರಿ ಯೋಜನೆಗಳಿಗೆ ಹಣ ಕಡಿತ ಸೇರಿದಂತೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಅಲ್ಲದೆ ಎಸ್ಸಿಪಿ ಮತ್ತು ಟಿ.ಎಸ್ಪಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲು ಮುಂದಾಗಿದೆ. ಇದು ಕಾನೂನು ಬಾಹಿರವಾದ ಕೆಲಸ ಆಗಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಸ್ಪೂರ್ತಿ ಚಿದಾನಂದ್ ಮಾತನಾಡಿ, ನಾವು ರೈತರು, ಬಡವರ ಪರ ಎಂದು ಹೇಳುವ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರವಿದ್ದಾಗ ಜಾರಿಗೆ ತಂದಿದ್ದ ಹಲವಾರು ಯೋಜನೆಗಳನ್ನು ಮೊಟುಕುಗೊಳಿಸುವ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ. ಚುನಾವಣೆ ಗೆಲ್ಲಲ್ಲಷ್ಟೇ ಗಮನಹರಿಸಿದ ಪರಿಣಾಮ ಅವರ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ನಮ್ಮ ಸರ್ಕಾರವಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ರದ್ದುಪಡಿಸಿದೆ. ಕೊಬ್ಬರಿಗೆ ೧೫ ಸಾವಿರ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿದ್ದ ಡಿ.ಕೆ.ಶಿವಕುಮಾರ್ ಕೇವಲ ೧೨೫೦ ರೂ ಕ್ವಿಂಟಾಲ್‌ಗೆ ಪ್ರೋತ್ಸಾಹಧನ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗಣ್ಣ, ಎಂ.ಬಿ.ನಂದೀಶ್,ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಮಧುಗಿರಿ ಜಿಲ್ಲಾ ಅಧ್ಯಕ್ಷ ಬಿ.ಕೆ. ಮಂಜುನಾಥ್, ಉಸ್ತುವಾರಿ ರುದ್ರೇಶ್, ಸ್ನೇಕ್ ನಂದೀಶ್, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಯುವ ಮೋರ್ಚಾ ಅಧ್ಯಕ್ಷ ಯಶಸ್, ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ, ಹಿಂದುಳಿದ ವರ್ಗದ ಮುಖಂಡ ಡಾ.ಎಂ.ಅರ್. ಹುಲಿನಾಯ್ಕರ್, ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ವಿಜಯಕುಮಾರ್, ಗಂಗಾಧರ್ ಮತ್ತಿತರರು ಭಾಗವಹಿಸಿದ್ದರು.