ರೈತನ ವಸ್ತು ಹಿಂದುರಿಗಿಸಿ ಮಾನವೀಯತೆ ಮೆರೆದ ತರಕಾರಿ ವ್ಯಾಪಾರಿ

ಲಿಂಗಸುಗೂರು.ನ.೫- ಇತ್ತೀಚಿನ ದಿನಗಳಲ್ಲಿ ಜನರು ದಾರಿಯಲ್ಲಿ ಕಳೆದುಕೊಂಡ ವಸ್ತುಗಳು ಮತ್ತೆ ಸಿಗುವುದು ವಿರಳ. ಕೆಲವರು ಮಾನವೀಯತೆ ಮೆರೆಯುವ ಮೂಲಕ ಪ್ರಾಮಾಣಿಕತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದು ಆಗಾಗ್ಗೆ ತೋರಿಸಿಕೊಡುತ್ತಲೇ ಇರುತ್ತಾರೆ. ಇದಕ್ಕೆ ಪೂರಕವಾದಂಥಹ ಘಟನೆಯೊಂದು ಪಟ್ಟಣದಲ್ಲಿ ಜರುಗಿದ್ದು, ವಸ್ತುವನ್ನು ಕಳೆದುಕೊಂಡಿದ್ದ ರೈತನಿಗೆ ವಾಪಸ್ ಕೊಡುವ ಮೂಲಕ ತರಕಾರಿ ವ್ಯಾಪಾರಿ ರಾಜಾಪಾಷಾ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ತರಕಾರಿ ವ್ಯಾಪಾರಿಯಾಗಿರುವ ಪಾಷಾ ಅವರು ಜನಸಂದಣಿ ಇರುವ ಪ್ರದೇಶದಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ತಮ್ಮ ಬಳಿಗೆ ಬರುವ ಗ್ರಾಹಕರ ಮೇಲೂ ಅಷ್ಟೆ ನಿಗಾ ಇಟ್ಟಿರುತ್ತಾರೆ. ಗ್ರಾಮೀಣ ಪ್ರದೇಶದಿಂದ ಬಂದ ರೈತನೊಬ್ಬ ತರಕಾರಿ ಖರೀದಿಸಿ ಅವಸರದಲ್ಲಿ ಪಂಪ್‌ಸೆಟ್‌ಗೆ ಬಳಸುವ ಪೈಪನ್ನು ಮರೆತು ತೆರಳಿದ್ದ. ಗ್ರಾಹಕರ ಸಂದಣಿ ಮಧ್ಯೆಯೂ ಎಚ್ಚೆತ್ತುಕೊಂಡ ವ್ಯಾಪಾರಿ ಪಾಷಾ ಕೂಡಲೇ ತಮ್ಮ ಕೆಲಸಗಾರನನ್ನು ಕಳಿಸಿ ರೈತ ಬಿಟ್ಟು ಹೋದ ವಸ್ತುವನ್ನು ಮರಳಿ ಕೊಟ್ಟರು.
ವ್ಯಾಪಾರಿಯ ಮಾನವೀಯತೆಯನ್ನು ಕಂಡು ರೈತ ಸಂತಸ ವ್ಯಕ್ತಪಡಿಸಿ, ಪಾಷಾರಿಗೆ ಅಭಿನಂದನೆ ಸಲ್ಲಿಸಿದರು.