ರೈತನ ತಾಳ್ಮೆ, ಸೈನಿಕರ ತ್ಯಾಗ ಸಮೃದ್ಧ ರಾಷ್ಟ್ರದ ಬುನಾದಿಯಾಗಿದೆ: ಶಾಂತಯ್ಯ ಸ್ವಾಮಿ

ಕಲಬುರಗಿ:ಮೇ.21:ದೇಶಕ್ಕೆ ಅನ್ನ ನೀಡುವ ರೈತನ ತಾಳ್ಮೆ, ಗಡಿ ಕಾಯುವ ಸೈನಿಕರ ತ್ಯಾಗದ ಮನೋಭಾವವೇ ಸಮೃದ್ಧ ರಾಷ್ಟ್ರದ ಬುನಾದಿಯಾಗಿದೆ ಎಂದು ಮಾಜಿ ಸೈನಿಕರಾದ ಶಾಂತಯ್ಯ ಸ್ವಾಮಿ ಗೊಬ್ಬುರ ಹೇಳಿದರು. ಕಲಬುರಗಿ ನಗರದ ಭವಾನಿ ನಗರದ ಬಬಲಾದ ಮಠದಲ್ಲಿ 211ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಆತುರದಿಂದ ಏನನ್ನು ಸಾದಿಸಲಾಗದು, ಅದೇ ರೀತಿ ಒತ್ತಾಯದಿಂದ ಏನನ್ನು ಪಡೆಯಲಾಗದು ಜೀವನದಲ್ಲಿ ತಾಳ್ಮೆ ಸಹನೆಯಿಂದ ಜೀವನ ಸಾಗಿಸಿದರೆ ಪರರಿಗೆ ಆದರ್ಶವಾಗುವ ಜೀವನ ನಮ್ಮದಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಸಿದ್ದಣಗೌಡ ಮಾಲಿ ಪಾಟೀಲ ಕಣ್ಣಿ ಮಾತನಾಡುತ್ತಾ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗವೂ ದೇಶದ ಸ್ವಾತಂತ್ರ್ಯ ಪಡೆಯಲು ಬಹು ಮುಖ್ಯವಾದ ಪಾತ್ರವಹಿಸಿದೆ, ಅದೇ ರೀತಿ ಇಂದಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಉಳಿಸಿಕೊಳ್ಳಲು, ಜೊತೆಗೆ ಸರ್ವರಿಗೂ ಸಮಾನವಾದ ಸ್ವಾತಂತ್ರ್ಯ ಸಿಗುವುದಕ್ಕಾಗಿ ಪತ್ರಕರ್ತರ ಕಾರ್ಯ ಬಹು ಮುಖ್ಯವಾಗಿದೆ. ಸಮಾಜದ ನಿಜವಾದ ಸ್ಥಿತಿ ಬರವಣಿಗೆಯ ಮೂಲಕ ಜನರಿಗೆ ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯ ಪತ್ರಕರ್ತರಿಂದ ಆಗಲೆಂದು ಹೇಳಿದರು. ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ಕು. ಶ್ರೇಯಾ ಹಾಗೂ ಸ್ನೇಹಾ ವಿಶ್ವಕರ್ಮ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ಸಂಗಮೇಶ ಹೂಗಾರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿಠಲರಾವ ಮಾಸ್ಟರ ಗೋಗಿ, ರೇವಣಸಿದ್ದಯ್ಯ ಶಾಸ್ತ್ರಿ, ಓಂ ಹಿರೇಮಠ, ಶಾಂತಲಿಂಗ ಕಲಬುರಗಿ, ಶರಣು ವರನಾಳ, ನಿರ್ಮಲಾ ಮಠಪತಿ, ಈರಮ್ಮ ಮಠಪತಿ, ಭಾಗ್ಯಶ್ರೀ ಡೊಂಗರಗಾಂವ, ಲಕ್ಷ್ಮೀಬಾಯಿ ಪೂಜಾರಿ, ಪಾರ್ವತಿ ಕುರಕೋಟಿ, ನೀಲಮ್ಮ ಸುತಾರ, ಮಾಣಿಕ ಗುತ್ತೇದಾರ, ಗುರುರಾಜ ಹಸರಗುಂಡಗಿ,ಪರಮೇಶ್ವರ ಕಣಮುಸ, ಶ್ರೀಕಾಂತ ಪಾಟೀಲ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೂ ಮಾಜಿ ಸೈನಿಕರಿಗೂ ಶ್ರೀಮಠದ ವತಿಯಿಂದ ಗೌರವಿಸಲಾಯಿತು.