ಅಫಜಲಪುರ:ಜೂ.14: ನಮ್ಮದು ಕೃಷಿ ಅವಲಂಬಿತ ಪ್ರಧಾನ ದೇಶ. ಈ ದೇಶದಲ್ಲಿ ರೈತನು ಪ್ರಥಮ ದರ್ಜೆ ನಾಯಕನಾಗಬೇಕು ಎಂದು ಶಾಸಕ ಎಂ.ವೈ ಪಾಟೀಲ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಸರ್ಕಾರ ರೈತರಿಗೆ ಸಹಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದ್ದು ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಮಳೆ ಬಂದ ಕೂಡಲೇ ಬಿತ್ತನೆ ಕಾರ್ಯ ಆರಂಭ ಮಾಡುವ ನಿಟ್ಟಿನಲ್ಲಿ ರೈತರು ಈಗಾಗಲೇ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ತೊಗರಿಗೆ ನೆಟೆ ರೋಗ ಬಾರದಂತೆ ಕೃಷಿ ಸಂಶೋಧಕರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು ರೈತರು ಸಂಬಂಧಪಟ್ಟ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೇಂದ್ರಕ್ಕೆ ತೆರಳಿ ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದು ತೊಗರಿ ಬೀಜ ಬಿತ್ತನೆ ಮಾಡಬೇಕು.
ರೈತರು ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ ವಾಣಿಜ್ಯ ಮತ್ತು ಇತರೆ ಲಾಭದಾಯಕ ಬೆಳೆಗಳನ್ನು ಬೆಳೆದಾಗ ಮಾತ್ರ ನೌಕರಿಗಿಂತ ತಾವು ಹೆಚ್ಚಿನ ಲಾಭ ಪಡೆಯಬಹುದು.
ರೈತರು ಸಂಘಟಿತರಾಗಿ ತಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಅಧಿಕಾರಿಗಳೊಂದಿಗೆ ಸಹಕಾರದಿಂದ್ದರೆ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು.
ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಸುಮಾರು 100 ರಿಂದ 150 ಕೋಟಿ ರೂ. ಅನುದಾನ ತಂದು ಕೆರೆ ತುಂಬುವ ಯೋಜನೆಗೆ ಒತ್ತು ನೀಡಲಾಗಿದ್ದು ಸುಮಾರು 18 ಕಾಮಗಾರಿಗಳು ಚಾಲನೆಯಲ್ಲಿವೆ ಹಾಗೂ ರೈತರು ನೀರು ಪೆÇೀಲಾಗದಂತೆ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಮಾತನಾಡಿ, ತೊಗರಿ ಬಿತ್ತನೆ ಮಾಡುವ ರೈತರು ಮಳೆ ಬಂದ ತಕ್ಷಣ ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಆರಂಭಿಸಬೇಕು. ಬಿತ್ತಿದ ಬೆಳೆಯನ್ನೇ ನಿರಂತರವಾಗಿ ಬಿತ್ತನೆ ಮಾಡದೆ ಆಗಾಗ ಬೆಳೆ ಪರಿವರ್ತನೆ ಮಾಡಿಕೊಂಡಾಗ ಮಾತ್ರ ನೆಟೆ ರೋಗ ಬಾಧಿಸುವ ಸಂಭವ ಕಡಿಮೆಯಾಗುತ್ತದೆ. ಕ್ಷೇತ್ರದಲ್ಲಿ ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಸೋಯಾಬಿನ್, ಮೆಕ್ಕೆ ಜೋಳದ ಬೀಜಗಳನ್ನು ಪಡೆಯುವ ಅರ್ಹ ಫಲಾನುಭವಿಗಳು ಆಯಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಕೃಷಿ ಅಧಿಕಾಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದು ಮುಖಂಡರಾದ ಶಿವಾನಂದ ಗಾಡಿ ಸಾಹುಕಾರ, ಚಂದು ಕರಜಗಿ, ಎಸ್.ಎಸ್ ಪಾಟೀಲ್, ಶರಣು ಕುಂಬಾರ ಸೇರಿದಂತೆ ರೈತರು ಉಪಸ್ಥಿತರಿದ್ದರು.