ರೈತನಿಗೆ ಸಾಗುವಳಿ ಚೀಟಿ ನೀಡಿದ ತಹಶೀಲ್ದಾರ್

ಕೋಲಾರ, ಆ.೪- ಗೋಮಾಳ ಜಮೀನಿನಲ್ಲಿ ಕಳೆದ ೫೦ ವರ್ಷಗಳಿಂದ ಸ್ವಾಧೀನಾನುಭವದಲ್ಲಿದ್ದ ರೈತನೊಬ್ಬನಿಗೆ ಕಳೆದ ೧೯೯೦ರಲ್ಲೇ ಜಮೀನು ಮಂಜೂರಾಗಿದ್ದರೂ ಈವರೆಗೂ ಸಾಗುವಳಿ ಚೀಟಿ ನೀಡಿರಲಿಲ್ಲ, ಈ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಕಾರ್ಯೋನ್ಮುಖರಾದ ತಹಸೀಲ್ದಾರ್ ನಾಗರಾಜ್ ಖುದ್ದು ರೈತನ ಮನೆಗೆ ಭೇಟಿ ನೀಡಿ ಸಾಗುವಳಿ ಚೀಟಿ ವಿತರಣೆ ಮಾಡಿದ ಘಟನೆ ನಡೆದಿದೆ.
ಕೋಲಾರ ತಾಲೂಕು ಕಸಬಾ ಹೋಬಳಿ ಈಕಂಬಳ್ಳಿ ಗ್ರಾಮದ ಗೋಮಾಳ ಸರ್ವೇ ನಂಬರ್ ನಲ್ಲಿ ಸುಮಾರು ೫೦ ವರ್ಷಗಳ ಸ್ವಾಧೀನಾನುಭವದಲ್ಲಿರುವ ರೈತರುಗಳಾದ ವೆಂಟ್ರಾಮಪ್ಪ, ಅಮರೇಶ್ ಎಂಬುವವರಿಗೆ ಕಳೆದ ೧೯೯೦ರಲ್ಲೇ ಜಮೀನು ಗ್ರಾಂಟ್ ಆಗಿತ್ತು ಆದರೆ ಈವರೆಗೂ ಸಾಗುವಳಿ ಚೀಟಿ ನೀಡಿರಲಿಲ್ಲ.
ತಾಲ್ಲೂಕು ಕಚೇರಿ ಆಡಳಿತಕ್ಕೆ ಚುರುಕು ಮುಟ್ಟಿಸಿರುವ ತಹಸೀಲ್ದಾರ್ ನಾಗರಾಜ್, ಈ ಸಂಬಂಧ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಿದ್ದು, ಅದರ ಭಾಗವಾಗಿ ಬಡ ರೈತರ ಮನೆಗೆ ಖುದ್ದು ಭೇಟಿ ನೀಡಿ ಸುಮಾರು ೨೨ ವರ್ಷಗಳಿಂದ ಸಾಗುವಳಿ ಚೀಟಿ ಪಡೆಯಲಾಗದೇ ನೊಂದಿದ್ದ ರೈತರಿಗೆ ಸಾಗುವಳಿ ಚೀಟಿ ವಿತರಿಸುವ ಮೂಲಕ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಅರ್ಜಿ ಹಾಕಿ ಅಲೆದಾಡಿದರೂ ಚಪ್ಪಲಿ ಸವೆಯುತ್ತದೆಯೇ ಹೊರತೂ ತಾಲ್ಲೂಕು ಕಚೇರಿಯಲ್ಲಿ ಯಾವುದೇ ದಾಖಲೆ ಪಡೆಯಲು ಸಾಧ್ಯವಿಲ್ಲ ಎಂಬ ಅಪವಾದವನ್ನು ದೂರ ಮಾಡಿ ತಾಲ್ಲೂಕು ಕಚೇರಿಯನ್ನು ರೈತರು, ಬಡವರಿಗೆ ಹತ್ತಿರವಾಗಿಸುವ ಕಾರ್ಯದಲ್ಲಿ ತಹಸೀಲ್ದಾರ್ ನಾಗರಾಜ್ ಪ್ರಮುಖ ಪಾತ್ರ ವಹಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ