ರೈತನಿಂದ ಲಂಚ: ಯಡ್ರಾಮಿ ಪಿಡಿಒ ಜಯಶ್ರೀ ಎಸಿಬಿ ವಶಕ್ಕೆ

ಕಲಬುರಗಿ,ಅ.12: ರೈತರೊಬ್ಬರಿಂದ ಪಹಣಿಯ ಹೆಸರು ಬದಲಾಯಿಸಲು ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದ ಘಟನೆ ಯಡ್ರಾಮಿ ತಹಸಿಲ್ ಕಚೇರಿಯಲ್ಲಿ ವರದಿಯಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಜಯಶ್ರೀ ಸಂತೋಷ್ ಕೊಡೇಕಲ್ ಎಂಬುವವರು ರೈತರೊಬ್ಬರಿಂದ ಏಳು ಸಾವಿರ ರೂ.ಗಳ ಲಂಚನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಅವರನ್ನು ವಶಕ್ಕೆ ಪಡೆದರು.
ಕಣಮೇಶ್ವರ್ ಗ್ರಾಮದ ರೈತರು ತಮ್ಮ ಪಹಣಿಯ ಹೆಸರು ಬದಲಾವಣೆ ಮಾಡಲು ಪ್ರತಿನಿತ್ಯ ಅಲೆದರೂ ಕೂಡ ಗ್ರಾಮ ಲೆಕ್ಕಾಧಿಕಾರಿ ಕೆಲಸ ಮಾಡಿರಲಿಲ್ಲ. ಗ್ರಾಮ ಲೆಕ್ಕಾಧಿಕಾರಿಯೇ ಪಹಣಿಯ ವಿಷಯ ನಿರ್ವಾಹಕಿಯಾಗಿದ್ದರಿಂದ ಹಲವು ದಿನಗಳಿಂದ ರೈತನಿಗೆ ಹಣದ ಬೇಡಿಕೆ ಇಟ್ಟಿದ್ದರು. ಕೊನೆಗೆ ಬೇಸತ್ತ ರೈತ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ಸಲ್ಲಿಸಿದರು.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಎಸಿಬಿ ಡಿವೈಎಸ್‍ಪಿ ಮಹೇಶ್ ಮೇಘಣ್ಣನವರ್ ಅವರ ನೇತೃತ್ವದಲ್ಲಿ ತಂಡ ದಾಳಿ ಮಾಡಿತು.