ಹುಮನಾಬಾದ್:ಮಾ.31: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬಹುತೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ರೈಟ್ ಟು ಲೀವ್ ಸಂಸ್ಥೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನಿವಾಗಿದೆ ಎಂದು ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ದತ್ತಾತ್ರೇಯ ಹೇಳಿದರು.
ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ರೈಟ್ ಟು ಲೀವ್ ಸಂಸ್ಥೆ ವತಿಯಿಂದ ನಿರ್ಮಿಸಿರುವ ನೂತನ ಶೌಚಾಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆ ಕಾಪಾಡಬೇಕು. ಜತೆಯಲ್ಲಿ ವರ್ಗಕೋಣೆಯಲ್ಲಿ ಬೋದಕರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ದಿನನಿತ್ಯ ಜೀವನದಲ್ಲಿ ನಿರಂತರ ಅಧ್ಯಾಯನ ಮಾಡಿ ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ರೈಟ್ ಟು ಲೀವ್ ಸಂಸ್ಥೆ ನಿರ್ದೇಶಕ ಸಿಕೆ ರಮೇಶ ಮಾತನಾಡಿ, ಹುಮನಾಬಾದ್ ತಾಲೂಕಿನ ವ್ಯಾಪ್ತಿಯ ಒಟ್ಟು ಮೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಗಣಕಯಂತ್ರಗಳನ್ನು ನೀಡಲಾಗಿದೆ. 15 ಶಾಲೆಗಲಿಗೆ ಸ್ಮಾರ್ಟ್ ಕ್ಲಾಸ್, 6 ಶಾಲೆಗಳಿಗೆ ನೂತನ ಶೌಚಾಲಯ ಕಟ್ಟಡ ನಿರ್ಮಾಣ, 9 ಶಾಲೆಗಳಿಗೆ ಡೆಸ್ಕ್, ಸ್ಕೂಲ್ ಬ್ಯಾಗ್, ಗ್ರೀನ್ ಬೋರ್ಡ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೈಟ್ ಟು ಲೀವ್ ಸಂಸ್ಥೆ ವ್ಯವಸ್ಥಾಪಕ ವೀರೇಶ ಸೊಂಡೆ, ಮಲ್ಲಿಕಾರ್ಜುನ್ ಮೋಳಕೇರಾ, ಶಾಲೆ ಮುಖ್ಯ ಶಿಕ್ಷಕ ದತ್ತಾತ್ರೆ ಪಂಚಾಳ, ನಿಂಬೂರ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಹಾದೇವ ಸಜ್ಜನ್, ನಾಗರಾಜ, ಎಸ್‍ಡಿಎಂಸಿ ಅಧ್ಯಕ್ಷ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.