ರೇಸ್ ಚಾಣಕ್ಯ ಶಾಲೆ ವಾರ್ಷಿಕೋತ್ಸವ ಸಂಭ್ರಮ


ರಾಯಚೂರು,ಫೆ.೨೫- ಮಕ್ಕಳನ್ನು ಉತ್ತಮ ನಾಗರಿಕರಾಗಿಸುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಾಲಾವಧಿ ನಂತರದಲ್ಲಿ ಮಕ್ಕಳ ಚಟುವಟಿಕೆ ಮೇಲೆ ಪಾಲಕರು ನಿಗಾಯಿರಿಸಬೇಕು. ಅವರಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡುವತ್ತ ಒತ್ತು ನೀಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಾರುತಿ ಎಸ್. ಬಗಾಡೆ ಹೇಳಿದರು.
ಅವರು ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ನಗರದ ರೇಸ್ ಚಾಣಕ್ಯ ಶಾಲೆಯ ಶಾಲಾ ವಾರ್ಷಿಕೋತ್ಸವ ಸಂಭ್ರಮ ಎಕ್ಸಟೇಸಿ-೨೦೨೩ ಉದ್ಘಾಟಿಸಿ ಮಾತನಾಡಿ, ಪಾಲಕರು ಕೇವಲ ಮಕ್ಕಳು ಉನ್ನತ ಸಾಧನೆ ಮಾಡಬೇಕೆಂದು ಕನಸ ಕಂಡರೆ ಸಾಲದು. ಅದಕ್ಕೆ ಪೂರಕವಾಗಿ ಮಕ್ಕಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.
ಇಂದಿನ ದಿನಮಾನದಲ್ಲಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದ್ದು ಮಕ್ಕಳಿಗೆ ಅಂಥ ಸಂದರ್ಭ ಎದುರಿಸುವ ಬಗೆಯನ್ನು ಹೇಳಿಕೊಡುವ ಕಾರ್ಯ ಆಗಬೇಕಿದೆ. ಕೆಟ್ಟ ಚಟಗಳತ್ತ ಮಕ್ಕಳು ಹೋಗದಂತೆ ಗಮನಹರಿಸಬೇಕು. ಮಕ್ಕಳು ಆಟವಾಡುತ್ತಾ ಕಲಿಕೆ ಮುಂದುವರಿಸಿ ಉತ್ತಮ ಸಾಧನೆ ಮಾಡುವಂತಾಗಬೇಕು. ಮಕ್ಕಳ ಮೇಲೆ ಅಂಕ ಗಳಿಸುವ ಒತ್ತಡ ಹೇರದೇ ಸರಾಗವಾಗಿ ಅವರು ವಿದ್ಯೆಯನ್ನು ಅರಿತು ಕಲಿಯುವಂತೆ ಮಾಡುವುದು ಪಾಲಕರ ಕರ್ತವ್ಯ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಕಾರಿ ಚಂದ್ರಶೇಖರ್ ಭಂಡಾರಿ ಮಾತನಾಡಿ, ಶಿಕ್ಷಣದ ಕಲಿಕೆಯಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಹೀಗಾಗಿ ಮಕ್ಕಳಿಗೆ ಎಲ್ಲರೂ ಶಿಕ್ಷಣದ ಜತೆಗೆ ಉತ್ತಮ ನಡೆವಳಿಕೆಯನ್ನೂ ಹೇಳಿಕೊಂಡುವಂತೆ ಕರೆ ನೀಡಿದರು.
ರೇಸ್ ಚಾಣಕ್ಯ ಶಾಲೆಯು ರಾಷ್ಟ್ರೀಯ ಶಿಕ್ಷಣ ನೀತಿಯ ಅಂಶಗಳನ್ನು ಈಗಾಗಲೇ ಅಳವಡಿಸಿಕೊಂಡು ಬೋಧನೆ ಮಾಡುತ್ತಿದ್ದು ಅದರಿಂದ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ನೆರವಾಗಲಿದೆ. ಇದರಿಂದ ಮಾತ್ರ ಮಕ್ಕಳ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ಮಾತನಾಡಿ, ರಾಯಚೂರಿನಲ್ಲಿ ರೇಸ್ ಚಾಣಕ್ಯ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅದೇ ರೀತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳ ಕೊರತೆಯಿದೆ. ಮಕ್ಕಳನ್ನು ದೂರದ ಮಂಗಳೂರು ಮತ್ತಿತರೆಡೆಯ ಶಾಲೆಗಳಿಗೆ ದಾಖಲಿಸುವ ಪಾಲಕರು ಜಿಲ್ಲೆಯಲ್ಲಿದ್ದಾರೆ. ಇದು ಸ್ಥಳೀಯವಾಗಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನಹರಿಸಿ ಬದಲಾವಣೆ ತರಬೇಕು ಎಂದರು.
ಜಿಲ್ಲೆಯ ಮಕ್ಕಳೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಐಎಎಸ್, ಐಪಿಎಸ್ ನಂಥ ಆಡಳಿತಾತ್ಮಕ ಸೇವೆಗಳಿಗೆ ಸೇರುವ ಮೂಲಕ ಜಿಲ್ಲೆಯ ಹೆಸರು ಎಲ್ಲೆಡೆ ಪಸರಿಸುವಂತೆ ಮಾಡಲು ಕರೆ ನೀಡಿದರು.
ರೇಸ್ ಚಾಣಕ್ಯ ಶಾಲೆಯ ಆಡಳಿತ ಮಂಡಳಿ ಜಂಟಿ ಕಾರ್ಯದರ್ಶಿ ಎಂ.ವೆಂಕಟೇಶ್, ಡಾ.ಶ್ರೀಲತಾ ಪಾಟೀಲ್ ಮಾತನಾಡಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಡಾ.ವೀರಭದ್ರ ಗದ್ವಾಲ್, ರೇಸ್ ಗ್ರುಪ್ ನ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ, ಕಾರ್ಯದರ್ಶಿ ಎಸ್.ವೆಂಕಟಕೃಷ್ಣ, ಜಂಟಿ ಕಾರ್ಯದರ್ಶಿ ಎಂ.ವೆಂಕಟೇಶ, ಅಕಾಡೆಮಿ ವಿಭಾಗದ ಅಧ್ಗಯಕ್ದಷ .ವಿ.ಶ್ರೀಧರ್ ರೆಡ್ಡಿ, ಪ್ರಾಚಾರ್ಯ ವಿ.ಪರಿಮಳಾ ರೆಡ್ಡಿ, ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ಸೇರಿದಂತೆ ಅನೇಕರಿದ್ದರು.
ಶಾಲೆಯ ಶಿಕ್ಷಕ ವೃಂದ, ಪಾಲಕರು ಮತ್ತಿತರರು ಪಾಲ್ಗೊಂಡಿದ್ದರು.
ಇದೇ ವೇಳೆ ನಂತರ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.